ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಸ್ಟೀವನ್ ಸ್ಮಿತ್ ಪಡೆ 1-1 ಸರಣಿ ಸಮಬಲ ಸಾಧಿಸಿದೆ.
ಇಲ್ಲಿನ ವಿಡಿಸಿಎ ಮೈದಾನದಲ್ಲಿ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 26 ಓವರ್ಗಳಲ್ಲಿ ಕೇವಲ 117 ರನ್ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ತಂಡ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 121 ರನ್ ಗಳಿಸಿ ಸುಲಭ ಗೆಲುವು ಪಡೆಯಿತು.
ವೇಗಿಗಳಿಗೆ ನೆರವು ನೀಡುವ ಪಿಚ್ನಲ್ಲಿ ಭಾರತೀಯ ವೇಗಿಗಳು ಒಂದೂ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು. ವೇಗಿ ಸ್ಟಾರ್ಕ್ ಎಸೆತಕ್ಕೆ ಭಾರತೀಯ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು.
ಸ್ಟಾರ್ಕ್ ಭಾರತದ ಅಗ್ರ ಕ್ರಮಾಂಕವನ್ನು ಬುಡಮೇಲು ಮಾಡಿದರು. ಶುಭ್ಮನ್ ಗಿಲ್ 0, ರೋಹಿತ್ ಶರ್ಮಾ 13 , ಸೂರ್ಯ ಕುಮಾರ್ ಯಾದವ್ 0, ಕೆ.ಎಲ್.ರಾಹುಲ್ 9,ಮೊಹ್ಮದ್ ಸಿರಾಜ್ ಅವರುಗಳ ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ 8 ಓವರ್ಗಳಿಂದ 53 ರನ್ ನೀಡಿ 5 ವಿಕೆಟ್ ಪಡೆದರು.
ಪ್ರತಿರೋಧ ತೋರಿದ ವಿರಾಟ್ ಕೊಹ್ಲಿ (35 ಎಸೆತ, 4 ಬೌಂಡರಿ, 31 ರನ್) ಎಲ್ಲಿಸ್ಗೆ ವಿಕೆಟ್ ಒಪ್ಪಿಸಿದರು.
10ನೇ ಓವರ್ನಲ್ಲಿ ದಾಳಿಗಿಳಿದ ಸಿಯಾನ್ ಅಬೋಟ್ ಹಾರ್ದಿಕ್ ಪಾಂಡ್ಯ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಹಾರ್ದಿಕ್ ನೀಡಿದ ಕ್ಯಾಚನ್ನು ನಾಯಕ ಸ್ಟೀವ್ ಸ್ಮಿತ್ ಸ್ಲಿಪ್ನಲ್ಲಿ ಆಕರ್ಷಕವಾಗಿ ಹಿಡಿದರು.
ರವೀಂದ್ರ ಜಡೇಜಾ 39 ಎಸೆತದಲ್ಲಿ 16 ರನ್ ಗಳಿಸಿದರು. ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ 22 ರನ್ಗಳ ಜತೆಯಾಟ ನೀಡಿದರು. ಆಲ್ರೌಂಡರ್ ಅಕ್ಸರ್ ಪಟೇಲ್ ಸ್ಟಾರ್ಕ್ ಎಸೆತದಲ್ಲಿ 2 ಸಿಕ್ಸರ್ಗಳನ್ನು ಸಿಡಿಸಿ ಅಜೇಯ 29 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 53ಕ್ಕೆ5, ಸೀಯಾನ್ ಅಬೋಟ್ 23ಕ್ಕೆ3, ನಥೇನ್ ಎಲ್ಲಿಸ್ 13ಕ್ಕೆ 2 ವಿಕೆಟ್ ಪಡೆದರು.
ಮಾರ್ಷ್ ಸ್ಫೋಟಕ ಬ್ಯಾಟಿಂಗ್
118 ರನ್ಗಳ ಸಾಧರಣ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಇನ್ನು 234 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
ಭಾರತ ವೇಗಿಗಳ ದಾಳಿಯನ್ನು ಸಮರ್ಥವಾಗಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಎದುರಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಮಾರ್ಷ್ 36 ಎಸೆತದಲ್ಲಿ 6 ಬೌಂಡರಿ 6 ಸಿಕ್ಸರ್ ಸಿಡಿಸಿ ಅಜೇಯ 66 ರನ್ ಗಳಿಸಿದರು. ಟ್ರಾವಿಸ್ ಹೆಡ್ 30 ಎಸೆತದಲ್ಲಿ 10 ಬೌಂಡರಿ ಹೊಡೆದು ಅಜೇಯ 51 ರನ್ ಗಳಿಸಿದರು.
ಭಾರತ ತವರಿನಲ್ಲಿ 4ನೇ ಬಾರಿ ಕಡಿಮೆ ಮೊತ್ತ
ತವರಿನಲ್ಲಿ ಭಾರತ ಏಕದಿನ ಕ್ರಿಕೆಟ್ನಲ್ಲಿ ನಾಲ್ಕನೆ ಬಾರಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮೂರನೆ ಬಾರಿ ಅತಿ ಕಡಿಮೆ ಮೊತ್ತ ಪೇರಿಸಿತು.ಈ ಹಿಂದೆ 1986ರಲ್ಲಿ ಶ್ರೀಲಂಕಾ ವಿರುದ್ಧ 78 ರನ್ಗೆ ಆಲೌಟ್ ಆಗಿತ್ತು. 1993ರಲ್ಲಿ ವಿಂಡೀಸ್ ವಿರುದ್ಧ 100 ರನ್, 2017ರಲ್ಲಿ `ಧರ್ಮಾಶಾಲಾದಲ್ಲಿ 112 ರನ್ ಗಳಿಸಿತು.