ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕಿರುವ ಟೀಮ್ ಇಂಡಿಯಾ ಇಂದು ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಏಕದಿನ ಕದನದಲ್ಲಿ ರೋಹಿತ್ ಪಡೆ ತವರಿನಲ್ಲಿ ಸರಣಿ ಉಳಿಸಿಕೊಳ್ಳಲು ಹೋರಾಡಲು ಪಣತೊಟ್ಟರೆ, ಆಸ್ಟ್ರೇಲಿಯಾ ಇತಿಹಾಸ ಸೃಷ್ಟಿಸಲು ಪ್ರಯತ್ನ ನಡೆಸಲಿದೆ.
ಈಗಾಗಲೆ ಸರಣಿಯಲ್ಲಿ ಉಭಯ ತಂಡಗಳು 1-1 ಸರಣಿ ಸಮಬಲ ಸಾಸಿದೆ.ಇಂದಿನ ನಿರ್ಣಾಯಕ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ದಿಟ್ಟವಾಗಿ ಎದುರಿಸಬೇಕಿದೆ.
ವೇಗಿ ಸ್ಟಾರ್ಕ್ ಅವರನ್ನು ಭಾರತೀಯ ಬ್ಯಾಟರ್ಗಳು ಹಲವಾರು ವರ್ಷಗಳಿಂದ ಎದುರಿಸುತ್ತಾ ಬಂದಿದ್ದಾರೆ. ಆದರೆ ಮುಂಬೈ ಮತ್ತು ವಿಶಾಖಪಟ್ಟಣದಲ್ಲಿ ವಿಫಲವಾಗುತ್ತಾ ಬಂದಿದ್ದಾರೆ. ವಾಂಖೆಡೆ ಮೈದಾನ ವೇಗಿಗಳಿಗೆ ಸ್ವಲ್ಪ ನೆರವು ನೀಡಿತು. ವಿಶಾಖಪಟ್ಟಣ ಮೈದಾನ ವೇಗಿಗಳಿಗೆ ಸಂಪುರ್ಣ ನೆರವು ನೀಡಿತು.
ಇಲ್ಲಿನ ಚೆಪಾಕ್ ಮೈದಾನ ನಿಧಾನಗತಿಯ ಬೌಲರ್ಗಳಿಗೆ ಹೆಚ್ಚು ನೆರವು ನೀಡುತ್ತದೆ. ಮಧ್ಯಯಮ ಓವರ್ಗಳಲ್ಲಿ ರನ್ಗಳಿಸಲು ಕಠಿಣವಾಗಲಿದೆ.
ಸದ್ಯ ಇಲ್ಲಿನ ಪಿಚ್ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾಗುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ವೇಗಿಗಳಿಗೂ ನೆರವು ನೀಡುವ ಸಾಧ್ಯತೆ ಇದೆ.
ಇಂದಿನ ಪಂದ್ಯದಲ್ಲಿ ಸೂರ್ಯ ಕುಮಾರ್ ಮತ್ತೆ ಕೇಂದ್ರ ಬಿಂದುವಾಗಲಿದ್ದಾರೆ. ಸೂರ್ಯಕುಮಾರ್ ಟಿ20 ಕ್ರಿಕೆಟ್ನಲ್ಲಿ ಆಡುವಂತೆ ಈ ಸರಣಿಯಲ್ಲಿ ಎಲ್ಲ ಎಸೆತವನ್ನು ಹೊಡೆಯಲು ಪ್ರಯತ್ನಿಸುತ್ತಿದ್ದು ಸಮತೋಲನ ಕಾಯ್ದುಕೊಳ್ಳಬೇಕಿದೆ.
ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಆಡುತ್ತಿರುವ ಸೂರ್ಯ ಕುಮಾರ್ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿಶ್ವಕಪ್ಗೆ ಆಯ್ಕೆಯಾಗಲು ಪ್ರಯತ್ನಿಸಬೇಕಿದೆ.
ಭಾರತೀಯ ಬೌಲರ್ಗಳು ಕೆಲಸದ ಹೊರೆಯನ್ನು ತುಂಬ ಗಂಭಿರವಾಗಿ ತೆಗೆದುಕೊಳ್ಳಬೇಕಿದೆ. ಕಳೆದ ಎರಡು ಏಕದಿನ ಪಂದ್ಯಗಳಿಂದ ಭಾರತೀಯ ಬೌಲರ್ಗಳು 47 ಓವರ್ (36 ಮತ್ತು 11 ಓವರ್) ಮಾಡಿದ್ದಾರೆ. ನಿಗದಿ ಮಾಡಿರುವ 100 ಓವರ್ಗಳಿಗಿಂತ ಕಡಿಮೆ ಹಾಕಿದ್ದಾರೆ.
ಭಾರತ ಟಾಸ್ ಗೆದ್ದರೆ ವೇಗಿಗಳಾದ ಮೊಹ್ಮದ್ ಶಮಿ ಹಾಗೂ ಮೊಹ್ಮದ್ ಸಿರಾಜ್ ಕರಾರುವಕ್ ದಾಳಿ ನಡೆಸಲು ಸಜ್ಜಾಗಬೇಕಿದೆ. ಮತ್ತೋರ್ವ ವೇಗಿ ಬೇಕಿರುವುದರಿಂದ ಶಾರ್ದೂಲ್ ಠಾಕೂರ್ ಅಥವಾ ಜಯದೇವ್ ಉನಾದ್ಕತ್ಗೆ ಅವಕಾಶ ಕೊಡಬಹುದಾಗಿದೆ. ಉಳಿದಂತೆ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ಹಾಗು ರವೀಂದ್ರ ಜಡೇಜಾ ಆಡಲಿದ್ದಾರೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭ್ಮಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ಕೆ.ಎಲ್.ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯಜ್ವಿಂದರ್ ಚಾಹಲ್,ಮೊಹ್ಮದ್ ಶಮಿ, ಮೊಹ್ಮದ್ ಸಿರಾಜ್, ಉಮ್ರಾನ್ ಮಲ್ಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನಾದ್ಕತ್.
ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೋಯ್ನಿಸ್, ಆ್ಯಲೆಕ್ಸ್ ಕ್ಯಾರಿ, ಗ್ಲೇನ್ ಮ್ಯಾಕ್ಸ್ವೆಲ್, ಕ್ಯಾಮರೊನ್ ಗ್ರೀನ್, ಜೋಶ್ ಇಂಗ್ಲಿಸ್, ಸೀಯಾನ್ ಅಬೋಟ್, ಆಶ್ಟನ್ ಅಗಾರ್, ಮಿಚೆಲ್ ಸ್ಟಾರ್ಕ್, ನಾಥೇನ್ ಎಲ್ಲಿಸ್, ಆ್ಯಡಮ್ ಜಂಪಾ.