ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ರಾಜಿನಾಮೆ ನೀಡಿದ ಮೇಲೆ ಎಲ್ಲವೂ ಎಡವಟ್ಟಾಗುತ್ತಿದೆ. ಟೆಸ್ಟ್ ಪಂದ್ಯಗಳಲ್ಲಿ ಶತಗಳು ಸಿಡಿಯುತ್ತಿಲ್ಲ. ಏಕದಿನ ಸರಣಿಗಳಲ್ಲೂ ರನ್ಗಳು ಮಾಯವಾಗಿವೆ. ಟಿ20 ಪಂದ್ಯಗಳಿಗೆ ಬೇಕಾದ ವೇಗದ ಆಟ ವಿರಾಟ್ ಬ್ಯಾಟ್ನಿಂದ ಬರುತ್ತಿಲ್ಲ. ಇದೆಲ್ಲದರ ಜೊತೆಗೆ ಸಿಕ್ಕ ಅವಕಾಶಗಳನ್ನು ಯುವಕರು ಎರಡೂ ಕೈಗಳಿಂದ ಬಾಚಿಕೊಂಡು ವಿರಾಟ್ ಜಾಗವನ್ನು ಅಲ್ಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ..!
ಯಸ್, ಅಚ್ಚರಿ ಆದರೂ ಇದು ಸತ್ಯ. ವಿರಾಟ್ ಕೊಹ್ಲಿ ಟಿ20ಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿಯುತ್ತಾರೆ. ಆದರೆ ಅವರ ಆಟ ವೇಗವನ್ನು ಕಳೆದುಕೊಂಡಿದೆ. ಇತ್ತೀಚೆಗೆ ಸ್ಥಿರತೆಯನ್ನೂ ಕಳೆದುಕೊಂಡಿದೆ. ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಮಾಡಿದ ಪ್ರಯೋಗ ರೋಹಿತ್ ಶರ್ಮಾ ಕೈ ಹಿಡಿದಿದೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿ ಸೇರಿದಂತೆ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ಆಡಿರುವ 8 ಇನ್ನಿಂಗ್ಸ್ಗಳಿಂದ 67ರ ಸರಾಸರಿ ಹಾಗೂ 147ರ ಸ್ಟ್ರೈಕ್ರೇಟ್ ಮೂಲಕ 340 ರನ್ಗಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಕೂಡ 3ನೇ ಕ್ರಮಾಂಕದಲ್ಲಿ ಯಶಸ್ಸು ಕಂಡಿದ್ದಾರೆ. ವೇಗ ಹಾಗೂ ಸ್ಥಿರತೆಯನ್ನೂ ಕೂಡ ಸೂರ್ಯ ಪ್ರದರ್ಶಿಸಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯ ಪ್ರಭಾವ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಸೂರ್ಯಕುಮಾರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಆಡಬಲ್ಲ ಫ್ಲೆಕ್ಸಿಬಿಲಿಟಿಯನ್ನು ಹೊಂದಿದ್ದಾರೆ.
ಇನ್ನೊಂದೆಡೆ ವಿರಾಟ್ ಕೊಹ್ಲಿ ಆಡುವ ತಂಡದಲ್ಲಿದ್ದರೆ ಕೇವಲ ಮೂರನೇ ಕ್ರಮಾಂಕದಲ್ಲೇ ಆಡುವ ಅನಿವಾರ್ಯತೆ ಇದೆ. ಜೊತೆಗೆ ಟಿ20 ಆಟಕ್ಕೆ ಬೇಕಾದ ವೇಗದ ಕೊರತೆ ವಿರಾಟ್ ಬ್ಯಾಟಿಂಗ್ನಲ್ಲಿ ಕಂಡು ಬರುತ್ತಿದೆ. ಇದೆಲ್ಲದರ ಜೊತೆಗೆ ಶ್ರೇಯಸ್ ಮತ್ತು ಸೂರ್ಯ ಸ್ಥಿರ ಪ್ರದರ್ಶನ ಅವರನ್ನು ತಂಡದ ಖಾಯಂ ಸದಸ್ಯನನ್ನಾಗಿ ಮಾಡುವ ತಾಕುತ್ತು ಹೊಂದಿದೆ. ಹೀಗಾಗಿ ವಿರಾಟ್ ಕೊಹ್ಲಿಯ ಟಿ20 ಆಟ ಬಹುತೇಕ ಮುಗಿದಂತೆಯೇ ಎಂದು ಲೆಕ್ಕಾಚಾರ ಶುರುವಾಗಿದೆ.