ನ್ಯೂಜಿಲೆಂಡ್ ಆಯ್ತು, ವೆಸ್ಟ್ಇಂಡೀಸ್ ಕೂಡ ಆಯ್ತು, ಈಗ ಶ್ರೀಲಂಕಾ ತಂಡವನ್ನು ಕೂಡ ಟೀಮ್ ಇಂಡಿಯಾ ವೈಟ್ ವಾಷ್ ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಸರಣಿ ಅಂತಿಮ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದ ಭಾರತ 3-0ಯಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಮೊಹಮ್ಮದ್ ಸಿರಾಜ್ ಧನುಷ್ಕಾ ಗುಣತಿಲಕ (0)ವಿಕೆಟ್ ಹಾರಿಸಿದರು. ಆವೇಶ್ ಖಾನ್, ನಿಸ್ಸಾಂಕ (1) ಮತ್ತು ಚರಿತ್ ಅಸಲಂಕಾ (4) ವಿಕೆಟ್ ಪಡೆದರು. ರವಿ ಬಿಷ್ಣೋಯಿ ಜನಿತ್ ಲಿಯನಗೆ (9) ರನ್ನು ಕ್ಲೀನ್ ಬೌಲ್ಡ್ ಮಾಡಿದರು.
29 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಲಂಕಾ ತಂಡಕ್ಕೆ ನಾಯಕ ದಾಸುನ್ ಶನಕ ಮತ್ತು ದಿನೇಶ್ ಚಾಂಡಿಮಲ್ ಆಸರೆಯಾದರು. ಚಾಂಡಿಯನ್ 22 ರನ್ಗಳಿಸಿದ್ದಾಗ ಹರ್ಷಲ್ಗೆ ವಿಕೆಟ್ ಒಪ್ಪಿಸಿದರು. ಶನಕ ಭಾರತೀಯ ಬೌಲರ್ಗಳನ್ನು ಬೆಂಡೆತ್ತಿದ್ದರು. ಕೇವಲ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 74 ರನ್ಗಳಿಸಿದರು. ಕರುಣರತ್ನೆ ಅಜೇಯ 12 ರನ್ ಸಿಡಿಸಿದರು. ಲಂಕಾ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ಗಳಿಸಿತು.
ಚೇಸಿಂಗ್ ವೇಳೆ ಭಾರತ ರೋಹಿತ್ ಶರ್ಮಾ (5)ವಿಕೆಟ್ ಬೇಗನೆ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ (18) ವೇಗದ ಆಟ ಆಡಿದರೂ ಹೆಚ್ಚು ರನ್ ಗಳಿಸಲಿಲ್ಲ. ಆದರೆ ರನ್ ಮಷಿನ್ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಅಜೇಯ ಆಟ ಆಡಿದರು. ಶ್ರೇಯಸ್ ಕೇವಲ 45 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿ ಗೆಲುವಿನ ರೂವಾರಿ ಯಾದರು. ದೀಪಕ್ ದೂಡ (21) ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡರು. ವೆಂಕಟೇಶ್ ಅಯ್ಯರ್ (5) ಬೇಗನೆ ಔಟಾದರು. ಆದರೆ ರವೀಂದ್ರ ಜಡೇಜಾ 15 ಎಸೆತಗಳಲ್ಲಿ ಅಜೇಯ 22 ರನ್ ಸಿಡಿಸಿ ಶ್ರೇಯಸ್ಗೆ ಸಾಥ್ ನೀಡಿದರು. ಭಾರತ 16.5 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತ ಕ್ಲೀನ್ ಸಾಧನೆಯೊಂದಿಗೆ ಸಂಭ್ರಮಿಸಿತು.