ಢಾಕಾ: ಏಷ್ಯನ್ ಚಾಂಪಿಯನ್ ಶಿಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ತಂಡ, ತನ್ನ ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಸಂಪ್ರದಾಯಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ.
ಭಾರತ ಚಾಂಪಿಯನ್ ಶಿಪ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಆಡಿರುವ ಮೊದಲ ಪಂದ್ಯದಲ್ಲಿ ದಕ್ಷಿಣ ಕೋರಿಯಾ ವಿರುದ್ಧ ಡ್ರಾ ಸಾಧಿಸಿರುವ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ವಿರುದ್ಧ ಅಬ್ಬರದ ಆಟವನ್ನು ಪ್ರದರ್ಶಿಸಿ ಗೆಲುವು ದಾಖಲಿಸಿತು. ಅಲ್ಲದೆ ನಾಲ್ಕು ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಪಾಕಿಸ್ತಾನ ಆಡಿರುವ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಭಾರತ ಸಕಲ ರಣ ತಂತ್ರವನ್ನು ರೂಪಿಸಿಕೊಂಡಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ದಿಲ್ ಪ್ರೀತ್ ಹಾಗೂ ಲಲಿತ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದಿಲ್ ಪ್ರೀತ್ ಬಾಂಗ್ಲಾ ವಿರುದ್ಧ ಮೂರು ಗೋಲು ದಾಖಲಿಸಿದರೆ, ಲಲಿತ, ಆಡಿರುವ ಎರಡೂ ಪಂದ್ಯಗಳಲ್ಲಿ ಗೋಲು ಸಿಡಿಸಿ ಮಿಂಚಿದ್ದಾರೆ. ಪಾಕ್ ವಿರುದ್ಧ ಜಯ ಸಾಧಿಸಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವತ್ತ ಭಾರತ ಚಿತ್ತ ನೆಟ್ಟಿದೆ.