ಆಟದಲ್ಲಿ ಇಡುವ ಹೆಜ್ಜೆ ಹೆಚ್ಚು ಕಡಿಮೆ ಆದರೆ ಏನಾಗುತ್ತದೆ ಅನ್ನುವುದು ಭಾರತದ ಮಹಿಳಾ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಲೀಗ್ ಪಂದ್ಯದ ಕಟ್ಟಕಡೆಯ ಓವರ್ನಲ್ಲಿ ಅರ್ಥವಾಗಿದೆ. ಒಂದು ನೋ ಬಾಲ್ ಭಾರತದ ಕೈಯಿಂದ ಪಂದ್ಯ ಕಿತ್ತುಕೊಂಡಿದ್ದಲ್ಲದೆ, ಟೂರ್ನಿಯಿಂದಲೇ ಹೊರದಬ್ಬಿದೆ. ಪಂದ್ಯದ ಕಟ್ಟ ಕಡೆಯ ಎಸೆತದಲ್ಲಿ ದಕ್ಷಿಣ ಆಪ್ರಿಕಾ ಭಾರತವನ್ನು ಟೂರ್ನಿಯಿಂದ ಹೊರಗಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸ್ಪೋಟಕ ಆರಂಭ ಸಿಕ್ಕಿತ್ತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ಬೆಂಡತ್ತಿದ್ದರು. ಶಫಾಲಿ ಕೇವಲ 46 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 53 ರನ್ಗಳಿಸಿ ರನೌಟ್ ಬಲೆಯಲ್ಲಿ ಬಿದ್ದರು. ಯಸ್ತಿಕಾ ಭಾಟಿಯಾ ಕೇವಲ 2 ರನ್ಗಳಿಸಿ ಔಟಾದರು.
ಸ್ಮೃತಿ ಮಂದಾನಾ ಮತ್ತು ನಾಯಕಿ ಮಿಥಾಲಿ ರಾಜ್ 80 ರನ್‌ಗಳ ಜೊತೆಯಾಟ ಕಟ್ಟಿದರು. ಈ ವೇಳೆ 71 ರನ್ಗಳಿಸಿದ್ದ ಮಂದಾನಾ ಔಟಾದರು. ಮಿಥಾಲಿ ಮತ್ತು ಹರ್ಮನ್ ಪ್ರಿತ್ ನಡುವೆ 58 ರನ್‌ಗಳ ಜೊತೆಯಾಟ ಬಂತು. ಈ ಹಂತದಲ್ಲಿ 68 ರನ್ಗಳಿಸಿದ್ದ ಮಿಥಾಲಿ ಔಟಾದರು. ಪೂಜಾ ವಸ್ತ್ರಾರ್ಕರ್ ಮತ್ತು ರಿಚಾ ಘೋಷ್ ಹೆಚ್ಚಿನ ಕೊಡುಗೆ ನೀಡಲಿಲ್ಲ.
ಹರ್ಮನ್ ಪ್ರಿತ್ ಸ್ಲಾಗ್ ಓವರುಗಳಲ್ಲಿ ಭಾರತದ ಮೊತ್ತವನ್ನು ಹೆಚ್ಚಿಸಿದರು. 48 ರನ್ಗಳಿಸಿದ್ದ ಹರ್ಮನ್ ಕೊನೆಯ ಓವರ್ನಲ್ಲಿ ಔಟಾದರು. ಭಾರತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 6 ರನ್ಗಳಿಸಿದ್ದ ಲಿಝೆಲ್ ಲಿ ವಿಕೆಟ್ ಅನ್ನು ರನೌಟ್ ರೂಪದಲ್ಲಿ ಕಳೆದುಕೊಂಡಿತು. ಆದರೆ ಲಾರ ವೋಲ್ವಾರ್ಡ್ ಮತ್ತು ಲಾರಾ ಗೂಡಲ್ ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ 2ನೇ ವಿಕೆಟ್ಗೆ 134 ರನ್ಗಳನ್ನು ಸೇರಿಸಿತು. 49 ರನ್ಗಳಿಸಿದ್ದ ಗೂಡಲ್ ಗಾಯಕ್ವಾಡ್ಗೆ ವಿಕೆಟ್ ಒಪ್ಪಿಸಿದರು. ಅರ್ಧಶತಕಗಳಿಸಿ ಮುನ್ನಡೆಯುತ್ತಿದ್ದ ವೊಲ್ವಾರ್ಡ್ 80 ರನ್ಗಳಿಸಿದ್ದ ವೇಳೆ ಹರ್ಮನ್ ಪ್ರಿತ್ಗೆ ವಿಕೆಟ್ ಒಪ್ಪಿಸಿದರು.
ನಾಯಕಿ ಸುನ್ ಲಸ್ ಮತ್ತು ಮಿಗ್ನನ್ ಡು ಪ್ರಿಝ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಹರ್ಮನ್ 22 ರನ್ಗಳಿಸಿದ್ದ ಲಸ್ ವಿಕೆಟ್ ಪಡೆದರು. ಡು ಪ್ರಿಝ್ ಮತ್ತು ಕಾಪ್ ನಡುವೆಯೂ ಉತ್ತಮ ಆಟ ಬಂತು. ಆದರೆ ಕಾಪ್ 32 ರನ್ಗಳಿಸಿ ರನೌಟ್ ಆದರು. ಟ್ರಯನ್ 9 ಎಸೆತಗಳಲ್ಲಿ 17 ರನ್ಗಳಿಸಿ ಲೆಕ್ಕಾಚಾರ ಬದಲಿಸಿದರು.
ಕೊನೆಯ 6 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ 7 ರನ್ಗಳು ಬೇಕಿತ್ತು. ದೀಪ್ತಿ ಶರ್ಮಾ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ 1 ರನ್ ಬಂತು. 2ನೇ ಎಸೆತದಲ್ಲಿ 2 ರನ್ ಕದಿಯುವ ಆತುರದಲ್ಲಿ ತ್ರಿಷಾ ಚೆಟ್ಟಿ ರನೌಟ್ ಆದರು. 3ನೇ ಎಸೆತದಲ್ಲಿ ಡು ಪ್ರಿಝ್ 1 ರನ್ ಪಡೆದುಕೊಂಡರು. 4ನೇ ಎಸೆತದಲ್ಲಿ ಶಬ್ನಿಮ್ ಇಸ್ಮಾಯಿಲ್ 1 ರನ್ ಪಡೆದುಕೊಂಡರು. 5ನೇ ಎಸೆತದಲ್ಲಿ 51 ರನ್ಗಳಿಸಿದ್ದ ಡು ಪ್ರಿಝ್ ಹರ್ಮನ್ ಕೈಗೆ ಕ್ಯಾಚ್ ಕೊಟ್ಟರು. ಆದರೆ ಅದು ನೋ ಬಾಲ್ ಆಗಿತ್ತು. ಅಷ್ಟೇ ಅಲ್ಲದೆ ನೋ ಬಾಲ್ ಸೇರಿ 2 ರನ್ ಸೇರ್ಪಡೆಯಾಗಿತ್ತು. ಕೊನೆಯ ಎರಡು ಎಸೆತದಲ್ಲಿ 2 ರನ್‌ಗಳ ಅವಶ್ಯಕತೆ ಇತ್ತು. ಮುಂದಿನ ಎಸೆತದಲ್ಲಿ ಇಸ್ಮಾಯಿಲ್ 1 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿದರು. ಕೊನೆಯ ಎಸೆತದಲ್ಲಿ ದಕ್ಷಿಣ ಅಪ್ರಿಕಾದ ಗೆಲುವಿಗೆ 1 ರನ್ ಬೇಕಿತ್ತು. ಸ್ಟ್ರೈಕ್ನಲ್ಲಿದ್ದ ಡು ಪ್ರಿಝ್ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದುಕೊಟ್ಟರು. ಕೊನೆಯ ಲೀಗ್ ಪಂದ್ಯದ ಕೊನೆಯ ಎಸೆತದಲ್ಲಿ ಟೂರ್ನಿಯಿಂದ ಹೊರ ಬಿತ್ತು.