ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ್ದೇ ಆಟ. ಮೊದಲು ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಭಾರತ ನಂತರ ಬೌಲಿಂಗ್ನಲ್ಲಿ ಮಿಂಚಿತು. ಶ್ರೀಲಂಕಾ 62 ರನ್ಗಳ ಹೀನಾಯ ಸೋಲು ಕಂಡಿತು.
ಟಾಸ್ ಗೆದ್ದ ಫೀಲ್ಡಿಂಗ್ ಆರಿಸಿಕೊಂಡಿತು. ರೋಹಿತ್ ಶರ್ಮಾ ಮತ್ತು ಇಶನ್ ಕಿಶನ್ ಶ್ರೀಲಂಕಾ ನಿರ್ಧಾರ ತಪ್ಪು ಅನ್ನುವುದನ್ನು 111ರನ್ಗಳ ಮೊದಲ ವಿಕೆಟ್ ಜೊತೆಯಾಟದ ಮೂಲಕ ಸಾಭೀತು ಮಾಡಿದರು. ಲಂಕಾ ಬೌಲರ್ಗಳನ್ನು ಬೆಂಡಿತ್ತಿದ ಈ ಜೋಡಿ ಫೋರ್, ಸಿಕ್ಸರ್ಗಳ ಸುರಿಮಳೆ ಮಾಡಿತು.
32 ಎಸೆತಗಳಲ್ಲಿ 2 ಫೋರ್ ಮತ್ತು 1 ಸಿಕ್ಸರ್ ನೆರವಿನಿಂದ 44 ರನ್ಗಳಿಸಿದ ರೋಹಿತ್ ಕುಮಾರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇಶನ್ ಕಿಶನ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದರು. 56 ಎಸೆತಗಳಲ್ಲಿ 10 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ ಕಿಶನ್ 89 ರನ್ಗಳಿಸಿ ಔಟಾದರು. ಸ್ಲಾಗ್ ಓವರುಗಳಲ್ಲಿ ಶ್ರೇಯಸ್ ಅಯ್ಯರ್ ಸ್ಪೋಟಕ ಆಟ ಆಡಿದರು. ಶ್ರೇಯಸ್ ಕೇವಲ 28 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿದರು. ಭಾರತ 20 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು 199 ರನ್ಗಳಿಸಿತು.
ಟಾರ್ಗೆಟ್ ಬೆನ್ನು ಹತ್ತುವ ಪ್ಲಾನ್ನಲ್ಲಿದ್ದ ಶ್ರೀಲಂಕಾಕ್ಕೆ ಮೊದಲ ಎಸೆತದಲ್ಲೇ ಶಾಕ್. ಪಥುನ್ ನಿಸ್ಸಾಂಕ ಭುವನೇಶ್ವರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕಮಿಲ್ ಮಿಶಾರಾ 13 ರನ್ಗಳಿಸಿ ಭುವಿಗೆ 2ನೇ ಬಲಿಯಾದರು. ಜನಿತ್ ಲಿಯನಗೆ ವೆಂಕಟೇಶ್ ಅಯ್ಯರ್ಗೆ ವಿಕೆಟ್ ಒಪ್ಪಿಸಿದರು. 10 ರನ್ಗಳಿಸಿದ ದಿನೇಶ್ ಚಾಂಡಿಮಲ್ ಜಡೇಜಾ ಎಸೆತದಲ್ಲಿ ಸ್ಟಂಪ್ ಔಟ್ ಆದರು. ದಾಸುನ್ ಶನಾಕ ಚಹಲ್ಗೆ ವಿಕೆಟ್ ಒಪ್ಪಿಸಿದರು.
ಇದೆಲ್ಲದರ ನಡುವೆ ಚರಿತ್ ಅಸಲಂಕಾ ಶ್ರೀಲಂಕಾದ ಮಾನ ಕಾಪಾಡಿದರು. ಅಸಲಂಕಾ 47 ಎಸೆತಗಳಲ್ಲಿ ಅಜೇಯ 53 ರನ್ ಸಿಡಿಸಿದರು. ಚಮಿಕಾ ಕರುಣಾರತ್ನೆ (21) ಮತ್ತು ದುಶ್ಮಂತ್ ಚಮೀರ ಅಜೇಯ 24 ರನ್ಗಳಿಸಿದರು. 20 ಓವರುಗಳಲ್ಲಿ ಲಂಕಾ 6 ವಿಕೆಟ್ ಕಳೆದುಕೊಂಡು 137 ರನ್ಗಳಿಸಿತು. 62 ರನ್ಗಳ ಗೆಲುವು ಕಂಡ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.