ವಿಶ್ವಕಪ್ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಸೋತ ಭಾರತ ತಂಡ ಅಮೋಘ ಪುಟಿದೆದ್ದಿದೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 81 ರನ್ ಗಳಿಂದ ಜಯ ಸಾಧಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾವನ್ನು 2 ರನ್ಗಳಿಂದ ಸೋಲಿಸಿತ್ತು.
ಎರಡನೇ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 258 ರನ್ ಗಳಿಸಿತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅರ್ಧಶತಕ ಬಾರಿಸಿದರು. ಸ್ಮೃತಿ 67 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 66 ರನ್ ಗಳಿಸಿದರೆ, ದೀಪ್ತಿ ಒಂದು ಬೌಂಡರಿ ನೆರವಿನಿಂದ 51 ರನ್ ಗಳಿಸಿದರು. ಇವರಿಬ್ಬರ ನಡುವೆ 117 ರನ್ಗಳ ಜೊತೆಯಾಟ ನಡೆಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಸ್ಮೃತಿ ತಲೆಗೆ ಪೆಟ್ಟು ಬಿದ್ದ ಕಾರಣ ಮಧ್ಯದಲ್ಲೇ ಬ್ಯಾಟಿಂಗ್ ತೊರೆಯಬೇಕಾಗಿತ್ತು.
ದೀಪ್ತಿ ಮತ್ತು ಸ್ಮೃತಿ ಹೊರತುಪಡಿಸಿ, ಯಾಸ್ತಿಕಾ ಭಾಟಿಯಾ 42 ರನ್ ಮತ್ತು ನಾಯಕಿ ಮಿಥಾಲಿ ರಾಜ್ 30 ರನ್ ಗಳಿಸಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಭಾರತ ತಂಡದ ಮಧ್ಯಮ ಕ್ರಮಾಂಕವು ಮತ್ತೊಮ್ಮೆ ರನ್ ಗಳಿಸಲು ವಿಫಲವಾಯಿತು.
ವೆಸ್ಟ್ ಇಂಡೀಸ್ ಪರ ಚೆರಿ ಆನ್ ಫ್ರೇಸರ್, ಕರಿಷ್ಮಾ ರಾಮ್ಹಾರ್ಕ್ ಮತ್ತು ಹ್ಯಾಲಿ ಮ್ಯಾಥ್ಯೂಸ್ ತಲಾ ಎರಡು ವಿಕೆಟ್ ಪಡೆದರು.
53 ರನ್ಗಳಿಗೆ ವೆಸ್ಟ್ ಇಂಡೀಸ್ನ 4 ವಿಕೆಟ್ಗಳು ಪತನಗೊಂಡವು. ಹ್ಯಾಲಿ ಮ್ಯಾಥ್ಯೂಸ್ (44) ಮತ್ತು ಶೀಮನ್ ಕ್ಯಾಂಪ್ಬೆಲ್ (63) ಇನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಇವರಿಬ್ಬರ ನಡುವೆ ಐದನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ತಂಡಕ್ಕೆ ನೆರವಾಯಿತು.
ಭಾರತದ ಪರ ಪೂಜಾ 3 ವಿಕೆಟ್ ಪಡೆದರು. 7 ಓವರ್ಗಳಲ್ಲಿ 21 ರನ್ ಬಿಟ್ಟುಕೊಟ್ಟರು. ದೀಪ್ತಿ ಶರ್ಮಾ 9 ಓವರ್ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರು. ಇವರಲ್ಲದೆ ಮೇಘನಾ ಸಿಂಗ್ 8 ಓವರ್ ಗಳಲ್ಲಿ 30ಕ್ಕೆ 2 ಹಾಗೂ ರಾಜೇಶ್ವರಿ ಗಾಯಕ್ವಾಡ್ 10 ಓವರ್ ಗಳಲ್ಲಿ 39ಕ್ಕೆ 2 ವಿಕೆಟ್ ಪಡೆದರು.