ಎಫ್ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತನ್ನ ಜಯದ ಓಟವನ್ನು ಮುಂದುವರಿಸಿದೆ. ಜರ್ಮನಿ ವಿರುದ್ಧ ಗುರುವಾರ ನಡೆದ ಮೊದಲ ಪಂದ್ಯದಲ್ಲಿ 3-0 ಗೋಲುಗಳ ಗೆಲುವು ಸಾಧಿಸಿತು. 11 ಪಂದ್ಯಗಳಲ್ಲಿ 8 ಗೆಲುವುಗಳನ್ನು ಸಾಧಿಸಿರುವ ಭಾರತ ಒಟ್ಟು 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 17 ಅಂಕ ಗಳಿಸಿರುವ ಜರ್ಮನಿ 2ನೇ ಸ್ಥಾನದಲ್ಲೇ ಮುಂದುವರಿದಿದೆ.
ಭಾರತ ಪರ ಹರ್ಮನ್ಪ್ರೀತ್ ಸಿಂಗ್ (18 ನೇ ನಿಮಿಷ, 27ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದರು. 45ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಗೋಲು ಗಳಿಸಿದರು. 2ನೇ ಪಂದ್ಯ ಶುಕ್ರವಾರ ನಡೆಯಲಿದೆ.ಭಾರತ ತಂಡಕ್ಕೆ ತವರಿನಲ್ಲಿ ಕೊನೆ ಪಂದ್ಯಗಳೆನಿಸಿವೆ. ಇನ್ನುಳಿದ ಪಂದ್ಯಗಳನ್ನು ಭಾರತ ವಿದೇಶಗಳಲ್ಲಿ ಆಡಬೇಕಿದೆ.
ಇದೇ ವೇಳೆ 15ನೇ ಆವೃತ್ತಿಯ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ 2023ರ ಲಾಂಛನವನ್ನು ಗುರುವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆಗೊಳಿಸಿದರು. ಟೂರ್ನಿ 2023ರ ಜ.13ರಿಂದ 29ರ ವರೆಗೆ ಭುವನೇಶ್ವರ ಹಾಗೂ ರೂರ್ಕೆಲಾದಲ್ಲಿ ನಡೆಯಲಿವೆ. 2018ರಲ್ಲೂ ವಿಶ್ವಕಪ್ ಆಯೋಜಿಸಿದ್ದ ಒಡಿಶಾಗೆ ಸತತ 2ನೇ ಬಾರಿ ಆತಿಥ್ಯ ಹಕ್ಕು ಲಭಿಸಿದೆ.