India A Team – ಭಾರತ ಎ ತಂಡಕ್ಕೆ ಸಂಜು ಕ್ಯಾಪ್ಟನ್.. ಸ್ಥಾನ ಪಡೆದುಕೊಂಡ ಪೃಥ್ವಿ ಶಾ..!
ಭಾರತ ಎ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್ ಅವರು ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಎ ತಂಡದ ವಿರುದ್ದ ಮೂರು ಏಕದಿನ ಪಂದ್ಯಗಳನ್ನು ಭಾರತ ಎ ತಂಡ ಆಡಲಿದೆ. ಸರಣಿಯ ಮೊದಲ ಪಂದ್ಯ ಸೆಪ್ಟಂಬರ್ 22ರಂದು ಚೆನ್ನೈ ನಲ್ಲಿ ನಡೆಯಲಿದೆ. ಹಾಗೇ ಸೆಪ್ಟಂಬರ್ 25 ಮತ್ತು 27ರಂದು ಎರಡನೇ ಹಾಗೂ ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಭಾರತ ಎ ತಂಡದಲ್ಲಿ ಪೃಥ್ವಿ ಶಾ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಪೃಥ್ವಿ ಶಾ ಅವರು ಬ್ಯಾಕ್ ಟು ಬ್ಯಾಕ್ ಶತಕ ದಾಖಲಿಸಿ ಮತ್ತೆ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದಾರೆ. 2021ರ ಆಸ್ಟ್ರೇಲಿಯಾ ಸರಣಿಯ ನಂತರ ಪೃಥ್ವಿ ಶಾ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ ದೇಶಿ ಕ್ರಿಕೆಟ್ ನಲ್ಲಿ ಅಮೋಘ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇದೀಗ ಭಾರತ ಎ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಶಾ ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದನ್ನು ಎದುರು ನೋಡುತ್ತಿದ್ದಾರೆ.
ಇನ್ನೊಂದೆಡೆ ಆಲ್ ರೌಂಡರ್ ರಾಜ್ ಅಂಗಡ್ ಬಾವಾ ಕೂಡ ಭಾರತ ಎ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಜ್ ಅಂಗಡ್ ಬಾವಾ ಅವರು 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇನ್ನುಳಿದಂತೆ ಭಾರತ ಎ ತಂಡದಲ್ಲಿ ಅಚ್ಚರಿಯ ಹೆಸರುಗಳಿಲ್ಲ. ಬಹುತೇಕ ಜಿಂಬಾಬ್ವೆ ಸರಣಿಯಲ್ಲಿ ಆಡಿದ್ದ ಆಟಗಾರರನ್ನೇ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಸಂಜು ಸ್ಯಾಮ್ಸನ್ ( ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಟಿದಾರ್, ಕೆ.ಎಸ್. ಭರತ್, ಕುಲದೀಪ್ ಯಾದವ್, ಶಭಾಝ್ ಅಹಮ್ಮದ್, ರಾಹಲ್ ಚಾಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಥಾಕೂರ್, ಉಮ್ರಾನ್ ಮಲ್ಲಿಕ್, ನವದೀಪ್ ಸೈನಿ, ರಾಜ್ ಅಂಗಡ್ ಬಾವಾ