Ind Vs Eng Test Match – ರಾಹುಲ್ ಭಾಯ್ ಸಲಹೆಯನ್ನು ಪರಿಪಾಲಿಸಿಕೊಂಡು ಆಡಿದ್ದೇನೆ – ರಿಷಬ್ ಪಂತ್..!

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೀರೋ ರಿಷಬ್ ಪಂತ್. ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಐದನೇ ಶತಕ ದಾಖಲಿಸಿದ್ದ ರಿಷಬ್ ಪಂತ್ ಅವರ ಅಮೋಘ ಇನಿಂಗ್ಸ್ ಈಗ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.
ಅದರಲ್ಲೂ ಕೋಚ್ ರಾಹುಲ್ ದ್ರಾವಿಡ್ ಅವರ ಖುಷಿಯನ್ನು ಬಣ್ಣಿಸಲು ಸಾಧ್ಯವಿಲ್ಲ. ಟೀಮ್ ಇಂಡಿಯಾದ ಹೆಡ್ ಆಗಿರುವ ದ್ರಾವಿಡ್ ಅಷ್ಟೊಂದು ಖುಷಿಯಾಗಿರಬೇಕಾದ್ರೆ ರಿಷಬ್ ಪಂತ್ ಅವರ ಆಟದ ವೈಖರಿ ಹೇಗಿತ್ತು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ಹೌದು, ರಿಷಬ್ ಪಂತ್ ಪಕ್ಕಾ ಎಂಟೈಟೇನರ್. ಅದರಲ್ಲಿ ಎರಡು ಮಾತಿಲ್ಲ. ಅದ್ಭುತವಾದ ಆಟವನ್ನು ಆಡಿದ್ರೂ ಬೇಜವಾಬ್ದಾರಿಯಿಂದ ವಿಕೆಟ್ ಗಳನ್ನು ಕೈಚೆಲ್ಲಿಕೊಳ್ಳುತ್ತಾರೆ. ಹೀಗಾಗಿ ರಿಷಬ್ ಪಂತ್ ನಂಬಿಕಸ್ಥ ಬ್ಯಾಟ್ಸ್ ಮೆನ್ ಅಲ್ಲ. ಆದ್ರೆ ತಂಡವನ್ನು ಅಪಾಯದಿಂದ ಪಾರು ಮಾಡುವುದು ಗೊತ್ತು. ಕೆಲವೇ ಸಮಯದಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮಥ್ರ್ಯವೂ ಅವರಲ್ಲಿದೆ. ಹೀಗಾಗಿಯೇ ರಿಷಬ್ ಪಂತ್ ಇಷ್ಟವಾಗೋದು. ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮನ ಗೆದ್ದಿರುವ ರಿಷಬ್ ಪಂತ್ ಈ ಹಿಂದೆಯೇ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರ ನೆಚ್ಚಿನ ಶಿಷ್ಯನೂ ಹೌದು.
ಇದೀಗ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಗಿರೋ ರಿಷಬ್ ಪಂತ್ ತನ್ನ ಅದ್ಭುತ ಇನಿಂಗ್ಸ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ದವೇ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸಿರುವ ಪಂತ್ ಇದೀಗ ಆಂಗ್ಲರ ವಿರುದ್ದ ತನ್ನ ಶತಕಗಳ ಸಂಖ್ಯೆಯನ್ನು ಮೂರಕ್ಕೇರಿಸಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಜೊತೆಗಿನ ಜೊತೆಯಾಟದ ಬಗ್ಗೆ ಮಾತನಾಡಿದ ಪಂತ್, ನಮ್ಮಿಬ್ಬರ ನಡುವೆ ಉತ್ತಮ ಜೊತೆಯಾಟವನ್ನು ಆಡಬೇಕು ಎಂಬುದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವು. ಅದಕ್ಕೆ ತಕ್ಕಂತೆ ಆಡಿದ್ದೇವು. ಉತ್ತಮ ಜೊತೆಯಾಟ ಆಡಲು ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕು ಅದನ್ನು ಮಾಡಿದ್ದೇವು ಅಂತ ಹೇಳ್ತಾರೆ ರಿಷಬ್ ಪಂತ್.
ಇನ್ನು ನಾನು ಇಂಗ್ಲೆಂಡ್ ತಂಡವನ್ನು ನನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡ ಎಂದು ಅಂದುಕೊಂಡಿಲ್ಲ. ಹಾಗೇ ನಾನು ಎದುರಾಳಿ ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಆಟದ ಕಡೆಗೆ ಮಾತ್ರ ಹೆಚ್ಚು ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿರುವ ಕಿವಿ ಮಾತುಗಳನ್ನು ಚಾಚು ತಪ್ಪದೇ ರಿಷಬ್ ಪಂತ್ ಈ ಇನಿಂಗ್ಸ್ ನಲ್ಲಿ ಪಾಲಿಸಿದ್ದಾರೆ. ಪ್ರತಿ ಎಸೆತಗಳನ್ನು ಅರಿತುಕೊಂಡು ಆಡು. ಬೇರೆ ವಿಷಯಗಳತ್ತ ಗಮನಹರಿಸಬೇಡ ಎಂದು ದ್ರಾವಿಡ್ ಭಾಯ್ ಹೇಳಿದ್ದರು. ಅದೇ ರೀತಿ ಆಡಿದ್ದೇ. ಜೊತೆಗೆ ರಕ್ಷಣಾತ್ಮಕ ಆಟದ ಕಡೆಗೂ ಹೆಚ್ಚು ಆದ್ಯತೆ ನೀಡುವುದರ ಬಗ್ಗೆ ಕಠಿಣ ಶ್ರಮ ವಹಿಸಿದ್ದೆ ಎಂದು ರಿಷಬ್ ಪಂತ್ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ನನ್ನ ಕೋಚ್ ತಾರಕ್ ಸರ್ ಅವರು ಈ ಹಿಂದೆಯೇ ಸಲಹೆ ನೀಡಿದ್ದರು. ನೀನು ಆಕ್ರಮಣಕಾರಿಯಾಗಿ ಆಡು. ಅದೇ ರೀತಿ ರಕ್ಷಣಾತ್ಮಕ ಆಟದ ಕಡೆಗೂ ಗಮನಹರಿಸಬೇಕು. ಬೌಲರ್ ಉತ್ತಮ ಎಸೆತಗಳನ್ನು ಹಾಕಿದಾಗ ಬೌಲರ್ ಗೂ ಗೌರವ ನೀಡಬೇಕು. ಅದನ್ನು ಕೂಡ ಮೈಗೂಡಿಸಿಕೊಂಡಿದ್ದೇನೆ ಅಂತಾರೆ ರಿಷಬ್ ಪಂತ್. Ind Vs Eng Test Match -Rishabh Pant reveals how he dug India out of a hole
ಇನ್ನು ಒತ್ತಡ ಯಾವಾಗಲೂ ಇರುತ್ತದೆ. ನಾನು ನನ್ನ ಆಟದ ಕಡೆಗೆ ಗಮನಹರಿಸುತ್ತೇನೆ. ಬೌಲರ್ ಯಾವ ರೀತಿ ಚೆಂಡನ್ನು ಎಸೆಯುತ್ತಾನೆ. ಅದನ್ನು ಅರಿತುಕೊಂಡು ಆಡುವತ್ತ ಗಮನಹರಿಸುತ್ತೇನೆ. ಹಾಗಂತ ನಾನು ಮುಂಚಿತವಾಗಿ ಯಾವುದೇ ಪ್ಲಾನ್ ಗಳನ್ನು ಮಾಡಿಕೊಳ್ಳುವುದಿಲ್ಲ. ನಿದಿಷ್ಟವಾಗಿ ಈ ಬೌಲರ್ ಅನ್ನೇ ಟಾರ್ಗೆಟ್ ಮಾಡಿಕೊಂಡು ರನ್ ಗಳಿಸಬೇಕು ಎಂಬ ಯೋಚನೆ, ಯೋಜನೆಗಳನ್ನು ಮಾಡಿಕೊಂಡಿರುವುದಿಲ್ಲ ಎಂದು ರಿಷಬ್ ಪಂತ್ ಹೇಳಿದ್ದಾರೆ.
ರಿಷಬ್ ಪಂತ್ ಅವರು 111 ಎಸೆತಗಳಲ್ಲಿ 20 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 146 ರನ್ ದಾಖಲಿಸಿದ್ದರು.