ಪ್ರವಾಸಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಸೂರ್ಯಕುಮಾರ್ ಯಾದವ್ ಹಾಗೂ ವೇಗಿ ದೀಪಕ್ ಚಹರ್, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ದ ಸೂರ್ಯಕುಮಾರ್, ಹೇರ್ಲೈನ್ ಫ್ಯಾಕ್ಚರ್ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಕೈಬಿಡಲಾಗಿದೆ. ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಂಡದೊಂದಿಗೆ ಲಕ್ನೋಗೆ ತೆರಳಿದ್ದ ಸೂರ್ಯಕುಮಾರ್, ತಂಡದ ಅಭ್ಯಾಸದಲ್ಲು ಪಾಲ್ಗೊಂಡಿದ್ದರು. ಆದರೆ 31 ವರ್ಷದ ಸೂರ್ಯಕುಮಾರ್ ಕೈ ಫ್ಯಾಕ್ಚರ್ ಆಗಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಸೂರ್ಯಕುಮಾರ್ ಎಲ್ಲಿ ಮತ್ತು ಯಾವಾಗ ಫ್ಯಾಕ್ಚರ್ ಆಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸೂರ್ಯಕುಮಾರ್ ಗಾಯಗೊಂಡಿದ್ದರು. ಹೀಗಾಗಿ ಇದೇ ಸಂದರ್ಭದಲ್ಲಿ ಅವರ ಕೈ ಫ್ಯಾಕ್ಚರ್ ಆಗಿದೆ ಎನ್ನಲಾಗಿದೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್, ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ನಡುವೆ ಟೀಂ ಇಂಡಿಯಾದ ಮತ್ತೋರ್ವ ಆಟಗಾರ ದೀಪಕ್ ಚಹರ್ ಕೂಡ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕಡೆಯ ಟಿ20 ಪಂದ್ಯದಲ್ಲಿ 2ನೇ ಓವರ್ ಬೌಲಿಂಗ್ ಮಾಡುವ ವೇಳೆ ಗಾಯಗೊಂಡ ದೀಪಕ್ ಚಹರ್, ಬೌಲಿಂಗ್ ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರನಡೆದಿದ್ದರು. ಹೀಗಾಗಿ ದೀಪಕ್ ಚಹರ್ ಟೀಂ ಇಂಡಿಯಾದೊಂದಿಗೆ ಲಕ್ನೋಗೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ಈ ಇಬ್ಬರು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಲಂಕಾ ಸರಣಿಯಿಂದ ಹೊರಗುಳಿದಿರುವ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಘೋಷಿಸಿಲ್ಲ ಮತ್ತು ಬದಲಿ ಆಟಗಾರರನ್ನು ಆಯ್ಕೆ ಮಾಡಿಲ್ಲ.
ಪ್ರವಾಸಿ ಶ್ರೀಲಂಕಾ ಹಾಗೂ ಭಾರತ ನಡುವಿನ ಟಿ20 ಸರಣಿ ಫೆ.24ರಂದು ಆರಂಭಗೊಳ್ಳಲಿದ್ದು, ಸರಣಿಯ ಮೊದಲ ಪಂದ್ಯ ಲಕ್ನೋದಲ್ಲಿ ನಡೆಯಲಿದೆ. ಫೆ.26 ಮತ್ತು 27ರಂದು ಧರ್ಮಶಾಲಾದಲ್ಲಿ ಉಳಿದೆರಡು ಪಂದ್ಯಗಳು ನಡೆಯಲಿವೆ.