ಅಖಾಡ ಯಾವ್ದೇ ಇರಲಿ, ಎದುರಾಳಿ ಯಾರೇ ಆಗಿರಲಿ… ಬ್ಯಾಟಿಂಗ್ನಲ್ಲಿ ಅಬ್ಬರಿಸೋ ಆಟಗಾರ ಅಂದ್ರೆ ರಿಷಬ್ ಪಂತ್. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಪಂತ್, ಭಾರತೀಯ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಟೀಂ ಇಂಡಿಯಾದ ಪಾಕೇಟ್ ಡೈನಮೇಟ್ ಎನಿಸಿರೋ ರಿಷಬ್ ಪಂತ್, ಶ್ರೀಲಂಕಾ ವಿರುದ್ದ ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಬ್ಯಾಟಿಂಗ್ನಿಂದ ಘರ್ಜಿಸಿದ್ದಾರೆ. ಬಿರುಸಿನ ಬ್ಯಾಟಿಂಗ್ನಿಂದ ವೇಗದ ಅರ್ಧಶತಕ ಬಾರಿಸಿದ ಪಂತ್, ಆ ಮೂಲಕ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಬಿರುಸಿನ ಆಟವಾಡಿದ ರಿಷಬ್ ಪಂತ್, ಶ್ರೀಲಂಕಾ ಬೌಲರ್ಗಳನ್ನ ಧೂಳಿಪಟ ಮಾಡಿದರು. ಚಿನ್ನಸ್ವಾಮಿ ಅಂಗಳದಲ್ಲಿ ಬೌಂಡರಿ, ಸಿಕ್ಸರ್ಗಳನ್ನ ಸಿಡಿಸಿದ ಪಂತ್, ಕೇವಲ 28 ಬಾಲ್ಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿ, ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೂ ವೇಗದ ಅರ್ಧಶತಕ ದಾಖಲಿಸಿದ ಬ್ಯಾಟ್ಸಮನ್ಗಳ ಪೈಕಿ ರಿಷಬ್ ಪಂತ್ ಮೊದಲ ಸ್ಥಾನದಲ್ಲಿದ್ದಾರೆ. ಈ ಹಿಂದೆ 1982ರಲ್ಲಿ ಪಾಕಿಸ್ತಾನದ ವಿರುದ್ಧ ಕಪಿಲ್ ದೇವ್(30 ಬಾಲ್ಗಳು), 2021ರಲ್ಲಿ ಇಂಗ್ಲೆಂಡ್ ವಿರುದ್ಧ ಶಾರ್ದೂಲ್ ಥಾಕೂರ್(31 ಬಾಲ್ಗಳು) ಹಾಗೂ 2008ರಲ್ಲಿ ಇಂಗ್ಲೆಂಡ್ ವಿರುದ್ಧ ವೀರೇಂದ್ರ ಸೆಹ್ವಾಗ್(32 ಬಾಲ್ಗಳು) ಭಾರತದ ಪರ ವೇಗದ ಅರ್ಧಶತಕ ಗಳಿಸಿದ್ದಾರೆ.
ಇನ್ನೂ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲೂ ರಿಷಬ್ ಪಂತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತದ ನೆಲದಲ್ಲಿ ವೇಗದ ಅರ್ಧಶತಕ ಬಾರಿಸಿದವರ ಪೈಕಿ ಶಹೀದ್ ಅಫ್ರೀದಿ( v ಭಾರತ, 26 ಬಾಲ್ಗಳು) ಮೊದಲ ಸ್ಥಾನದಲ್ಲಿದ್ದರೆ, ಇಯಾನ್ ಬಾಥಂ(v ಭಾರತ, 28 ಬಾಲ್ಗಳು), ರಿಷಪ್ ಪಂತ್(v ಶ್ರೀಲಂಕಾ, 28 ಬಾಲ್ಗಳು) ಹಾಗೂ ಅರ್ಜುನ ರಣತುಂಗ(v ಭಾರತ, 31 ಬಾಲ್ಗಳು) ಈ ಸಾಧನೆ ಮಾಡಿದ್ದಾರೆ.