ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮಿಂಚಿರುವ ಉದಯೋನ್ಮುಖ ಪ್ಲೇಯರ್ಗಳಾದ ಉಮ್ರಾನ್ ಮಲ್ಲಿಕ್, ಮೊಸೀನ್ ಖಾನ್ ಹಾಗೂ ‘ಓಲ್ಡ್ ಹಾರ್ಸ್’ಗಳಾದ ಶಿಖರ್ ಧವನ್, ದಿನೇಶ್ ಕಾರ್ತಿಕ್ ಅವರುಗಳು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿದ್ದು, ತವರಿನಲ್ಲಿ ನಡೆಯುವ ಸರಣಿಗಾಗಿ ಭಾನುವಾರ ಭಾರತ ತಂಡ ಪ್ರಕಟಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ 2021ರ ಟಿ20 ವಿಶ್ವಕಪ್ ನಂತರದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಸಾರಥ್ಯವಹಿಸಿರುವ ಹಾರ್ದಿಕ್ ಪಾಂಡ್ಯ, ಸಹ ಸೌತ್ ಆಫ್ರಿಕಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿ ಮೂಲಕ ಟೀಂ ಇಂಡಿಯಾಕ್ಕೆ ವಾಪಸ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುತ್ತಿರುವುದು ಟೀಂ ಇಂಡಿಯಾದ ಬಲ ಹೆಚ್ಚಿಸಲಿದೆ.
ಸತತ ಎರಡು ತಿಂಗಳ ಕಾಲ ನಡೆದ ಐಪಿಎಲ್ ಟೂರ್ನಿಯಿಂದಾಗಿ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರು ಜೂನ್ 9ರಿಂದ ಆರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯಿಂದ ಹೊರಗುಳಿಯಲು ನಿರ್ಧಾರಿಸಿದ್ದಾರೆ. ಪ್ರಮುಖವಾಗಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರ ಅವರುಗಳು ಟಿ20 ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡುವ ತಂಡವೇ ಜೂನ್ ತಿಂಗಳಲ್ಲಿ ನಡೆಯುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸುವ ಜವಾಬ್ದಾರಿ ಶಿಖರ್ ಧವನ್ ಅಥವಾ ಗುಜರಾತ್ ಟೈಟನ್ಸ್ ತಂಡವನ್ನ ಉತ್ತಮವಾಗಿ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಒಲಿಯಲಿದೆ. ಇದೇ ವರ್ಷದಲ್ಲಿ ಆಸ್ಟ್ರೇಲಿಯಾ ಅಂಗಳದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನ ಗಮನದಲ್ಲಿಟ್ಟುಕೊಂಡು, ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ತಂಡವನ್ನ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.