ನಿರ್ಣಾಯಕ ಪಂದ್ಯದಲ್ಲಿ ಸಂಘಟಿತ ಪ್ರದರ್ಶನದ ಮೂಲಕ ಸೌತ್ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 87 ರನ್‌ಗಳಿಗೆ ಆಲೌಟ್ ಆಗುವ ಮೂಲಕ 82 ರನ್‌ಗಳ ಹೀನಾಯ ಸೋಲನುಭವಿಸಿತು. ಇದರೊಂದಿಗೆ ಸರಣಿ ಸಮಬಲಗೊಂಡಿದ್ದು, ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ಜೂ.19ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ದಿನೇಶ್-ಪಾಂಡ್ಯ ಆಸರೆ:
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(5), ಇಶಾನ್ ಕಿಶನ್(27), ಶ್ರೇಯಸ್ ಅಯ್ಯರ್(4) ಹಾಗೂ ರಿಷಬ್ ಪಂತ್(17) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಆದರೆ ನಂತರ ಜೊತೆಯಾದ ಹಾರ್ದಿಕ್ ಪಾಂಡ್ಯ(46) ಹಾಗೂ ದಿನೇಶ್ ಕಾರ್ತಿಕ್(55) ಅದ್ಭುತ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರು. ಸ್ಪೋಟಕ ಆಟವಾಡಿದ ದಿನೇಶ್ ಕಾರ್ತಿಕ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಪರಿಣಾಮ ಭಾರತ 20 ಓವರ್‌ಗಳಲ್ಲಿ 169 ರನ್‌ಗಳಿಸಿತು. ಸೌತ್ ಆಫ್ರಿಕಾ ಪರ ಎನ್‌ಗಿಡಿ 2, ಜಾನ್ಸನ್, ಪ್ರಿಟೋರಿಯಸ್, ನೋಕಿಯಾ ಹಾಗೂ ಮಹಾರಾಜ್ ತಲಾ 1 ವಿಕೆಟ್ ಪಡೆದರು.

ಆವೇಶ್ ಮಾರಕ ಬೌಲಿಂಗ್:
ಟೀಂ ಇಂಡಿಯಾ ನೀಡಿದ 170 ರನ್‌ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ, ಆವೇಶ್ ಖಾನ್(4/18) ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾದ ಕ್ವಿಂಟನ್ ಡಿಕಾಕ್(14), ತೆಂಬ ಬವುಮಾ(ರಿಟೈರ್ಡ್ ಹರ್ಟ್) ಗಾಯಗೊಂಡು ಪೆವಿಲಿಯನ್ ಸೇರಿದರು. ನಂತರ ಕಣಕ್ಕಿಳಿದ ದುಸೇನ್(20) ರನ್‌ಗಳಿಸಿದ್ದು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಪ್ರಿಟೋರಿಯಸ್(0), ಕ್ಲಾಸನ್(8), ಮಿಲ್ಲರ್(9) ಹಾಗೂ ಜಾನ್ಸನ್(12) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕಣದಲ್ಲಿ ಉಳಿಯಲಿಲ್ಲ. ಭಾರತದ ಪರ ಚಹಲ್ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.