ಟೀಂ ಇಂಡಿಯಾದ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ತಮ್ಮ ಅದ್ಭುತ ಬ್ಯಾಟಿಂಗ್ ಟ್ಯಾಲೆಂಟ್ನಿಂದ ಎಲ್ಲರ ಗಮನ ಸೆಳೆದಿದ್ದು, ಪಂದ್ಯದಿಂದ ಮಿಂಚುತ್ತಿರುವ ಆರಂಭಿಕ ಆಟಗಾರ ʼಮಿಸ್ಟರ್ ಕನ್ಸಿಸ್ಟೆಂಟ್ʼ ಆಗಿ ಛಾಪು ಮೂಡಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಶ್ರೇಷ್ಠ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ನ್ಯೂಜಿ಼ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ ಶುಭ್ಮನ್ ಗಿಲ್(208) ಭರ್ಜರಿ ಡಬಲ್ ಸೆಂಚುರಿ ಬಾರಿಸುವ ಮೂಲಕ ದ್ವಿಶತಕ ಸಿಡಿಸಿದ ಕಿರಿಯ ಆಟಗಾರನಾಗಿ ಮಿಂಚಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಡಬಲ್ ಸೆಂಚುರಿ ಹೊಡೆದು ಮಿಂಚಿದ್ದ ಶುಭ್ಮನ್ ಗಿಲ್ ಅಬ್ಬರ ರನ್ ದಾಹ ಇಷ್ಟಕ್ಕೆ ನಿಲ್ಲಲಿಲ್ಲ. ಸರಣಿಯ ಅಂತಿಮ ಪಂದ್ಯದಲ್ಲೂ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ಗಿಲ್, 78 ಬಾಲ್ಗಳಲ್ಲಿ 112 ರನ್ ಬಾರಿಸಿ ಮತ್ತೊಂದು ಶತಕದ ಸಂಭ್ರಮ ಆಚರಿಸಿದರು. ಅಲ್ಲದೇ ನಾಯಕ ರೋಹಿತ್ ಶರ್ಮ ಜೊತೆಗೂಡಿ ಮೊದಲ ವಿಕೆಟ್ಗೆ 212 ರನ್ಗಳ ಬೃಹತ್ ಜೊತೆಯಾಟದಲ್ಲೂ ಭಾಗಿಯಾದರು.
ಡಬಲ್ ಸೆಂಚುರಿಸಿ ಬಾರಿಸಿದ ಬೆನ್ನಲ್ಲೇ ಮತ್ತೊಂದು ಶತಕದ ಸಂಭ್ರಮ ಕಂಡ ಶುಭ್ಮನ್ ಗಿಲ್, ಆ ಮೂಲಕ ರೋಹಿತ್ ಶರ್ಮ ಅವರನ್ನೇ ಅನುಸರಿಸಿದರು. ಹಿಟ್ ಮ್ಯಾನ್ ರೋಹಿತ್ ಶರ್ಮ ಸಹ 264 ರನ್ಗಳ ದ್ವಿಶತಕ ಬಾರಿಸಿದ ಬೆನ್ನಲ್ಲೇ ಶತಕ ಸಿಡಿಸಿ ಮಿಂಚಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ಗಳಿಸಿ ಅಬ್ಬರಿಸಿದ್ದ ರೋಹಿತ್, ನಂತರ ಆಸ್ಟ್ರೇಲಿಯಾ ವಿರುದ್ಧ 138 ರನ್ಗಳಿಸಿದ್ದರು. ಇನ್ನೂ ನ್ಯೂಜಿ಼ಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ಸಹ ಇದೇ ಸಾಧನೆ ಮಾಡಿದ್ದರು. 2015ರ ವಿಶ್ವಕಪ್ನಲ್ಲಿ ಡಬಲ್ ಸೆಂಚುರಿ ಬಾರಿಸುವ ಮುನ್ನ ಭರ್ಜರಿ ಶತಕ ದಾಖಲಿಸಿದ್ದರು.
Team India, Rohit Sharma, Shubman Gill, New Zealand, ODI Series, Double Hundred, Sports Karnataka