ಆರಂಭಿಕರಾದ ರೋಹಿತ್ ಶರ್ಮ(101) ಹಾಗೂ ಶುಭ್ಮನ್ ಗಿಲ್(112) ಅವರ ಬೊಂಬಾಟ್ ಬ್ಯಾಟಿಂಗ್ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ನ್ಯೂಜಿ಼ಲೆಂಡ್ ವಿರುದ್ಧದ 3ನೇ ODI ಪಂದ್ಯದಲ್ಲಿ ಭಾರತ 90 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತು.
ಇಂಧೋರ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 50 ಓವರ್ಗಳಲ್ಲಿ 9 ವಿಕೆಟ್ಗೆ 385 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್, ಆರಂಭಿಕ ಆಟಗಾರ ಡೆವೊನ್ ಕಾನ್ವೇ(138) ಏಕಾಂಗಿ ಹೋರಾಟದ ನಡುವೆಯೂ 41.2 ಓವರ್ಗಳಲ್ಲಿ 295 ರನ್ಗಳಿಸಿ ಆಲೌಟ್ ಆಗುವ ಮೂಲಕ 90 ರನ್ಗಳ ಸೋಲು ಕಂಡಿತು. ಅಲ್ಲದೇ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತು.
ರೋಹಿತ್-ಗಿಲ್ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮ ಹಾಗೂ ಶುಭ್ಮನ್ ಗಿಲ್ ಅದ್ಭುತ ಆರಂಭ ನೀಡಿದರು. ಕಿವೀಸ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ ಮೊದಲ ವಿಕೆಟ್ 212 ರನ್ಗಳ ಜೊತೆಯಾಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮ(101) ODI ಕ್ರಿಕೆಟ್ನಲ್ಲಿ 30ನೇ ಶತಕ ದಾಖಲಿಸಿದರೆ. ಶುಭ್ಮನ್ ಗಿಲ್(112) ತಮ್ಮ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರು. ಒಂದು ಹಂತದಲ್ಲಿ 400ಕ್ಕೂ ಅಧಿಕ ಮೊತ್ತ ಕಲೆಹಾಕುವ ಅವಕಾಶ ಹೊಂದಿದ್ದ ಭಾರತ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪರಿಣಾಮ ಆರಂಭಿಕರ ವಿಕೆಟ್ ಪತನದ ಬಳಿಕ ಬಂದ ವಿರಾಟ್ ಕೊಹ್ಲಿ(36), ಇಶಾನ್ ಕಿಶನ್(17), ಸೂರ್ಯಕುಮಾರ್(14) ತಂಡಕ್ಕೆ ಆಸರೆಯಾಗಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಪಾಂಡ್ಯ(54) ಅರ್ಧಶತಕದ ಮೂಲಕ ತಂಡದ ಮೊತ್ತವನ್ನ 380ರ ಗಡಿದಾಟಿಸಿದರು. ಇವರಿಗೆ ಶಾರ್ದೂಲ್ ಥಾಕೂರ್(25) ಉಪಯುಕ್ತ ಕಾಣಿಕೆ ನೀಡಿದರು. ಕಿವೀಸ್ ಪರ ಜೇಕಬ್ ಡಫಿ ಹಾಗೂ ಟಿಕ್ನರ್ ತಲಾ 3 ವಿಕೆಟ್ ಪಡೆದರು.
ಕಾನ್ವೇ ಏಕಾಂಗಿ ಹೋರಾಟ:
ಭಾರತ ನೀಡಿದ 386 ರನ್ಗಳ ಸವಾಲಿನ ಮೊತ್ತ ಚೇಸ್ ಮಾಡಿದ ಕಿವೀಸ್ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಫಿನ್ ಅಲೆನ್(0) ಪೆವಿಲಿಯನ್ ಸೇರಿದರು. ಆದರೆ ನಂತರದಲ್ಲಿ ಜೊತೆಯಾದ ಡೆವೋನ್ ಕಾನ್ವೇ(138) ಹಾಗೂ ಹೆನ್ರಿ ನಿಕೋಲ್ಸ್(42) ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯ ಆಟವಾಡಿದ ಕಾನ್ವೇ, ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆದರೆ ಇವರು ಔಟಾದ ಬಳಿಕ ಬಂದ ಬ್ಯಾಟ್ಸ್ಮನ್ಗಳು ಜವಾಬ್ದಾರಿಯ ಆಟವಾಡದ ಪರಿಣಾಮ ಕಿವೀಸ್ 295 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಶಾರ್ದೂಲ್ ಥಾಕೂರ್, ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ. ಯುಜ್ವೇಂದ್ರ ಚಹಲ್ 2, ಪಾಂಡ್ಯ ಮತ್ತು ಮಲ್ಲಿಕ್ ತಲಾ 1 ವಿಕೆಟ್ ಪಡೆದರು.
ಮೂರನೇ ODIನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಶಾರ್ದೂಲ್ ಥಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಮೂರು ಪಂದ್ಯಗಳ ಸರಣಿಯಲ್ಲಿ ದ್ವಿಶತಕ ಹಾಗೂ ಒಂದು ಶತಕದೊಂದಿಗೆ ಮಿಂಚಿದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
White wash, Team India, New Zealand, Rohit Sharma, Shubman Gill, ODI Series