IND v BAN ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ನ ಮಹತ್ವದ ಪಂದ್ಯದಲ್ಲಿ ಭಾರತ(India) ಹಾಗೂ ಬಾಂಗ್ಲಾದೇಶ(Bangladesh) ತಂಡಗಳು ಮುಖಾಮುಖಿ ಆಗುತ್ತಿವೆ. T20I ವಿಶ್ವಕಪ್ನಲ್ಲಿ ಸೆಮಿಫೈನಲ್ನತ್ತ ಮುಖ ಮಾಡಿರುವ ಎರಡು ತಂಡಕ್ಕೂ ಈ ಪಂದ್ಯದ ಗೆಲುವು ಅತ್ಯಂತ ಪ್ರಮುಖವಾಗಿದೆ. ಎರಡು ತಂಡಗಳು T20I ಕ್ರಿಕೆಟ್ನಲ್ಲಿ ಹಲವು ಪಂದ್ಯಗಳನ್ನ ಆಡಿದ್ದು, ಬಾಂಗ್ಲಾ ಹುಲಿಗಳ ಎದುರು ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಕಳೆದ ಪಂದ್ಯದ ಸೋಲಿನ ನಂತರ ಕಮ್ಬ್ಯಾಕ್ ನಿರೀಕ್ಷೆಯಲ್ಲಿರುವ ರೋಹಿತ್ ಶರ್ಮ ಪಡೆ, ಬಾಂಗ್ಲಾದೇಶದ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 11 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಟೀಂ ಇಂಡಿಯಾ 10 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನ ಸೋಲಿಸಿ ಮೇಲುಗೈ ಸಾಧಿಸಿದ್ದರೆ. ಬಾಂಗ್ಲಾದೇಶ ಕೇವಲ ಒಂದು ಬಾರಿ ಗೆಲುವಿನ ರುಚಿ ಕಂಡಿದೆ. 2019ರ ನವೆಂಬರ್ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ತಂಡ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದೆ. ಮುಸ್ತಫಿಜು಼ರ್ ರಹೀಮ್ ಅವರ ಉತ್ತಮ ಆಟದ ನೆರವಿನಿಂದ ಮಹಮದುಲ್ಲಾ ಸಾರಥ್ಯದ ಬಾಂಗ್ಲಾದೇಶ ಟೀಂ ಇಂಡಿಯಾವನ್ನ ಸೋಲಿಸಿತ್ತು.
ಇದೀಗ ಎರಡು ತಂಡಗಳು ನ.2ರಂದು ನಡೆಯುವ ಸೂಪರ್-12 ಹಂತದ ಪಂದ್ಯದಲ್ಲಿ ಮತ್ತೊಂದು ಜಿದ್ದಾಜಿದ್ದಿನ ಕಾದಾಟಕ್ಕೆ ಸಜ್ಜಾಗಿವೆ. ಎರಡು ತಂಡಗಳ ನಡುವಿನ ಈವರೆಗಿನ ಹಣಾಹಣಿಯಲ್ಲಿ ಭಾರತ ಮೇಲುಗೈ ಹೊಂದಿದ್ದರೂ, ಬಾಂಗ್ಲಾದೇಶ ತಂಡವನ್ನ ಯಾವುದೇ ಹಂತದಲ್ಲೂ ಲಘುವಾಗಿ ಪರಿಗಣಿಸುವಂತಿಲ್ಲ. ಈ ಹಿಂದೆಯೂ ಟೀಂ ಇಂಡಿಯಾಕ್ಕೆ ಸಾಕಷ್ಟು ಕಾಟ ಕೊಟ್ಟಿರುವ ಬಾಂಗ್ಲಾ ಪಡೆ, ಮತ್ತೊಮ್ಮೆ ರೋಹಿತ್ ಪಡೆಗೆ ಟಕ್ಕರ್ ಕೊಡಲು ರಣತಂತ್ರ ರೂಪಿಸಿಕೊಂಡಿವೆ.