“ಭಾರತೀಯ ಕ್ರಿಕೆಟ್ನ ರಾಜಕುಮಾರ” ಎಂದೇ ಖ್ಯಾತಿ ಪಡೆದಿರುವ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ.
ಇಂಧೋರ್ನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಪ್ರಾಬಲ್ಯವನ್ನ ಮುಂದುವರಿಸಿದ ಶುಭ್ಮನ್ ಗಿಲ್, ಇನ್ನಿಂಗ್ಸ್ ಆರಂಭದಲ್ಲಿ ಸ್ವಲ್ಪಮಟ್ಟಿನ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಆದರೆ 5ನೇ ಓವರ್ ನಂತರದಲ್ಲಿ ತಮ್ಮ ಅಸಲಿ ಆಟವಾಡಿದ ಗಿಲ್, ಆಸ್ಟ್ರೇಲಿಯಾ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, 92 ಬಾಲ್ಗಳಲ್ಲಿ 6 ಬೌಂಡರಿ, 4 ಸಿಕ್ಸ್ ಮೂಲಕ ಶತಕ ದಾಖಲಿಸಿ ಮಿಂಚಿದರು. ಇದು ಶುಭ್ಮನ್ ಗಿಲ್ ಅವರ 6ನೇ ಏಕದಿನ ಶತಕವಾಗಿದ್ದು, ಪ್ರಸಕ್ತ ವರ್ಷದಲ್ಲಿ ಸಿಡಿಸಿದ 5ನೇ ಏಕದಿನ ಶತಕವಾಗಿದೆ. ಆದರೆ ಉತ್ತಮವಾಗಿ ಆಡುತ್ತಿದ್ದ ಗಿಲ್, 104 ರನ್ ಗಳಿಸಿದ್ದ ಸಂದರ್ಭದಲ್ಲಿ ಕೆಮರೂನ್ ಗ್ರೀನ್ ಅವರ ಬೌಲಿಂಗ್ನಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಕೇವಲ ಶತಕ ಬಾರಿಸಿದ್ದಲ್ಲದೇ 2ನೇ ವಿಕೆಟ್ಗೆ ಶ್ರೇಯಸ್ ಅಯ್ಯರ್ ಜೊತೆಗೂಡಿ ಅಮೋಘ 200(164) ರನ್ಗಳ ಅತ್ಯುತ್ತಮ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಮುಂದುವರಿದ ಗಿಲ್ ಫಾರ್ಮ್:
ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ಆಸ್ಟ್ರೇಲಿಯಾ ವಿರುದ್ಧವೂ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ ಗಿಲ್, ವೇಗವಾಗಿ ಏಕದಿನ ಕ್ರಿಕೆಟ್ನಲ್ಲಿ 6ನೇ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದುಕೊಂಡರು. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲೂ ಉತ್ತಮ ಆಟವಾಡಿದ ಗಿಲ್, ಆಕರ್ಷಕ ಅರ್ಧಶತಕ ಬಾರಿಸಿದ್ದರು. ಇನ್ನೂ ಇದೇ ವರ್ಷ ಇಂಧೋರ್ನಲ್ಲಿ ನ್ಯೂಜಿ಼ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲೂ ಸಹ ಶುಭ್ಮನ್ ಗಿಲ್ ಶತಕ ಬಾರಿಸಿದ್ದರು. ಶತಕದ ಮೇಲೆ ಶತಕ ಬಾರಿಸುತ್ತಲೇ ಏಕದಿನ ವಿಶ್ವಕಪ್ನತ್ತ ಹೆಜ್ಜೆ ಇಡುತ್ತಿರುವ ಶುಭ್ಮನ್ ಗಿಲ್, ಐಸಿಸಿ ಏಕದಿನ ಬ್ಯಾಟರ್ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಎಲ್ಲಾ ಅವಕಾಶ ಹೊಂದಿದ್ದಾರೆ.
IND v AUS, Shubman Gill, Team India, Australia, ODI Cricket