ಗಾಯದ ಸಮಸ್ಯೆ ಬಳಿಕ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದರು ಬ್ಯಾಟಿಂಗ್ ಲಯ ಕಂಡುಕೊಳ್ಳಲು ವಿಫಲವಾಗಿದ್ದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಬಾರಿಸುವ ಮೂಲಕ ಅಬ್ಬರಿಸಿದ್ದಾರೆ.
ಇಂಧೋರ್ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್, ಇನ್ನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಶ್ರೇಯಸ್ ಅಯ್ಯರ್, 41 ಬಾಲ್ಗಳಲ್ಲಿ ಅರ್ಧಶತಕ ದಾಖಲಿಸಿ ಮಿಂಚಿದರು. ಇದಾದ ನಂತರವೂ ತಮ್ಮ ಬ್ಯಾಟಿಂಗ್ ಅಬ್ಬರವನ್ನ ಮುಂದುವರಿಸಿದ ಶ್ರೇಯಸ್ ಅಯ್ಯರ್, ಜವಾಬ್ದಾರಿಯುತ ಆಟದ ಮೂಲಕ ತಂಡದ ರನ್ ವೇಗವನ್ನ ಹೆಚ್ಚಿಸಿದರು. ಆ ಮೂಲಕ 86 ಬಾಲ್ಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸ್ ನೆರವಿನಿಂದ ಶತಕ ಬಾರಿಸಿ ಮಿಂಚಿದರು. ಇದು ಶ್ರೇಯಸ್ ಅಯ್ಯರ್ ಅವರ 3ನೇ ಏಕದಿನ ಶತಕವಾಗಿದೆ.
ಕೇವಲ ಶತಕ ಬಾರಿಸಿದ್ದು ಮಾತ್ರವಲ್ಲದೇ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಜೊತೆಗೂಡಿ 2ನೇ ವಿಕೆಟ್ಗೆ ಅಮೋಘ 200(164) ರನ್ಗಳ ಅತ್ಯುತ್ತಮ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮ ಆಟವಾಡಿದ ಶ್ರೇಯಸ್ ಅಂತಿಮವಾಗಿ ವೈಯಕ್ತಿಕ 105 ರನ್ಗಳಿಸಿ, ಸೆನ್ ಅಬೋಟ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇದಕ್ಕೂ ಮುನ್ನ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶ್ರೇಯಸ್ ಅಯ್ಯರ್, ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವೈಫಲ್ಯ ಅನುಭವಿಸಿದ್ದರು. ಇದರ ಪರಿಣಾಮ ಶ್ರೇಯಸ್ ಅಯ್ಯರ್ ಅವರ ಆಯ್ಕೆ ಬಗ್ಗೆ ಸಾಕಷ್ಟು ಟೀಕೆ ಹಾಗೂ ಪ್ರಶ್ನೆಗಳು ಉದ್ಭವಿಸಿತ್ತು. ಆದರೆ ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಈ ಎಲ್ಲಾ ಟೀಕೆ, ಪ್ರಶ್ನೆಗಳಿಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ.
IND v AUS, Team India, Australia, Shreyas Iyer, ODI Cricket