ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಜ್ಜಾಗಿದ್ದು, ಮುಂಬೈನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಭಾರತದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಕೌಟುಂಬಿಕ ಕಾರಣದಿಂದ ರೋಹಿತ್ ಶರ್ಮ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದು, ಹೀಗಾಗಿ ಹಾರ್ದಿಕ್ ಪಾಂಡ್ಯ ಹಂಗಾಮಿ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಅಲ್ಲದೆ ಹಿಟ್ ಮ್ಯಾನ್ ರೋಹಿತ್ ಅನುಪಸ್ಥಿತಿಯಲ್ಲಿ ಶುಭ್ಮನ್ ಗಿಲ್ ಅವರೊಂದಿಗೆ ಇಶಾನ್ ಕಿಶಾನ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.
ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳ ಸರಣಿಯಲ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕ ಬಾರಿಸಿ ಮಿಂಚಿದ್ದರು. ಆದರೆ ಕಿವೀಸ್ ವಿರುದ್ಧದ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಇಶಾನ್ ಕಿಶನ್, ಆಸೀಸ್ ವಿರುದ್ಧದ ODI ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
WTC ಫೈನಲ್‌ನಲ್ಲಿ ಆಡಲ್ಲ:
ಈ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವನ್‌ನಲ್ಲಿ ಆಡುವ ಬಗ್ಗೆ ಪ್ರತಿಕ್ರಿಯಿಸಿದ ಹಾರ್ದಿಕ್ ಪಾಂಡ್ಯ, ʼನಾನು ನೈತಿಕವಾಗಿ ತುಂಬಾ ಬಲಿಷ್ಠ ವ್ಯಕ್ತಿ. ಆದರೆ ನಾನು ಟೆಸ್ಟ್ ತಂಡಕ್ಕೆ ತಲುಪಲು 10% ಸಹ ಪ್ರಯತ್ನ ಮಾಡಿಲ್ಲ. ನಾನು ಶೇ.1ರಷ್ಟು ಸಹ ತಂಡದ ಭಾಗವಾಗಿಲ್ಲ. ಹೀಗಾಗಿ ನಾನು ಯಾರೊಬ್ಬರ ಸ್ಥಾನವನ್ನು ತೆಗೆದುಕೊಳ್ಳುವುದು ನೈತಿಕವಾಗಿ ಸರಿಯಲ್ಲ. ಒಂದು ವೇಳೆ ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸಿದ್ದೇ ಆದರೆ, ನಾನು ಪ್ರಯತ್ನದ ಮೂಲಕ ಹೋಗಿ ನನ್ನ ಸ್ಥಾನ ಪಡೆಯುತ್ತೇನೆ. ಆದ್ದರಿಂದ ನನ್ನ ಸ್ಥಾನ ನಾನು ಪಡೆದಿದ್ದೇನೆ ಎಂದು ಭಾವಿಸುವವರೆಗೂ ನಾನು WTC ಫೈನಲ್ ಅಥವಾ ಭವಿಷ್ಯದ ಟೆಸ್ಟ್ ಸರಣಿಗೆ ಲಭ್ಯವಿರುವುದಿಲ್ಲ ಎಂದಿದ್ದಾರೆ.
IND v AUS, Team India, Australia, ODI Series, Hardik Pandya, Gill-Kishan