ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ(65) ಆಕರ್ಷಕ ಅರ್ಧಶತಕ ಹಾಗೂ ಐಡೆನ್ ಮಾರ್ಕ್ರಂ(56) ಅವರು ಅದ್ಭುತ ಬ್ಯಾಟಿಂಗ್ನಿಂದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 196 ರನ್ಗಳ ಟಾರ್ಗೆಟ್ ನೀಡಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಗುಜರಾತ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಸನ್ರೈಸರ್ಸ್ ಹೈದ್ರಾಬಾದ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ಗಳಿಸಿತು. ಎಸ್ಆರ್ಎಚ್ ಪರ ಅಭಿಷೇಕ್ ಶರ್ಮ(65) ಹಾಗೂ ಐಡೆನ್ ಮಾರ್ಕ್ರಂ(56) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ಅಭಿಷೇಕ್-ಮಾರ್ಕ್ರಂ ಆಸರೆ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್ರೈಸರ್ಸ್ ಹೈದ್ರಾಬಾದ್, ನಾಯಕ ಕೇನ್ ವಿಲಿಯಂಸನ್(5) ಹಾಗೂ ರಾಹುಲ್ ತ್ರಿಪಾಠಿ(16) ಅವರನ್ನ ಬಹುಬೇಗನೆ ಕಳೆದುಕೊಂಡಿತು. 3ನೇ ವಿಕೆಟ್ಗೆ ಜೊತೆಯಾದ ಅಭಿಷೇಕ್ ಶರ್ಮ 65 ರನ್(42 ಬಾಲ್, 6 ಬೌಂಡರಿ, 3 ಸಿಕ್ಸ್) ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಐಡೆನ್ ಮಾರ್ಕ್ರಂ 56 ರನ್(40 ಬಾಲ್, 2 ಬೌಂಡರಿ, 3 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಗುಜರಾತ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 3ನೇ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಆದರೆ ಅಭಿಷೇಕ್ ಶರ್ಮ ಹಾಗೂ ಐಡೆನ್ ಮಾರ್ಕ್ರಂ ವಿಕೆಟ್ ಪತನದ ನಂತರ ಬಂದ ನಿಕೋಲಸ್ ಪೂರನ್(3), ವಾಷಿಂಗ್ಟನ್ ಸುಂದರ್(3) ಜವಾಬ್ದಾರಿಯ ಆಟವಾಡುವಲ್ಲಿ ವಿಫಲರಾದರು. ಕೊನೆ ಹಂತದಲ್ಲಿ ಬಂದ ಶಶಾಂಕ್ ಸಿಂಗ್ 25* ರನ್ (6 ಬಾಲ್, 1 ಬೌಂಡರಿ, 3 ಸಿಕ್ಸ್) ಬಿರುಸಿನ ಆಟವಾಡಿದರೆ, ಮಾರ್ಕ್ರೋ ಯಾನ್ಸನ್(8*) ರನ್ಗಳಿಸಿದರು. ಕೊನೆಯ ಓವರ್ನಲ್ಲಿ 25 ರನ್ಗಳಿಸಿದ ಶಶಾಂಕ್ ಸಿಂಗ್, ತಂಡದ ಮೊತ್ತವನ್ನ 195ಕ್ಕೆ ಏರಿಸಿದರು.
ಶಮಿ ಅದ್ಭುತ ಬೌಲಿಂಗ್:
ಗುಜರಾತ್ ಟೈಟನ್ಸ್ ಪರ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ(3/39) ಅದ್ಭುತ ಪ್ರದರ್ಶನ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಯಶ್ ದಯಾಳ್(1/24), ಅಲ್ಜಾರಿ ಜೋಸೆಫ್(1/35) ಬೌಲಿಂಗ್ನಲ್ಲಿ ಮಿಂಚಿದರು.