ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಅವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಸದ್ಯ ಸ್ಟಾರ್ ಆಟಗಾರ್ತಿಯ ಗಾಯದ ಸಮಸ್ಯೆ ಬಗ್ಗೆ ನಿಗಾವಹಿಸಲಾಗಿದ್ದು, 2022ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಭಿಯಾನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಟೀಂ ಇಂಡಿಯಾಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಸೌತ್ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ 2022ರ ಮೊದಲ ಅಭ್ಯಾಸ ಪಂದ್ಯದ ವೇಳೆ ಸ್ಮೃತಿ ಮಂದಾನ ಅವರ ತಲೆಗೆ ಪಟ್ಟಾಗಿತ್ತು. ಸೌತ್ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಎಸೆದ ಬೌನ್ಸರ್, ಸ್ಮೃತಿ ಮಂದಾನ ಅವರ ಎಡ ಭಾಗದ ತಲೆ ಹಾಗೂ ಕಿವಿಗೆ ಬಡಿದಿತ್ತು. ಹೀಗಾಗಿ ಬ್ಯಾಟಿಂಗ್ ಅರ್ಧಕ್ಕೆ ಮೊಟಕುಗೊಳಿಸಿದ ಸ್ಮೃತಿ ಮಂದಾನ ಮೈದಾನದಿಂದ ಹೊರ ನಡೆದಿದ್ದರು. ಈ ವೇಳೆ ಸ್ಮೃತಿ ಮಂದಾನ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಮೊದಲ ಅಭ್ಯಾಸ ಪಂದ್ಯದಲ್ಲೇ ಭಾರತ ಮಹಿಳಾ ತಂಡದ ರನ್ ಮಷಿನ್ ಎನಿಸಿರುವ ಸ್ಮೃತಿ ಮಂದಾನ ಗಾಯಗೊಂಡಿದ್ದು, ತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಆದರೆ 25 ವರ್ಷದ ಎಡಗೈ ಬ್ಯಾಟರ್‌ನ ವೈದ್ಯಕೀಯ ತಪಾಸಣೆ ನಡೆಸಿರುವ ವೈದ್ಯರ ಪ್ರಕಾರ ಸ್ಮೃತಿ ಮಂದಾನ ಅವರಿಗೆ ಯಾವುದೇ ಹೆಚ್ಚಿನ ತೊಂದರೆಯಾಗಿಲ್ಲ ಎಂದು ವರದಿ ನೀಡಿದ್ದಾರೆ. ಹೀಗಾಗಿ ಸ್ಮೃತಿ ಮಂದಾನ ಅವರು 2022ರ ವಿಶ್ವಕಪ್ ಟೂರ್ನಿಯ ತಮ್ಮ ಅಭಿಯಾನ ಮುಂದುವರೆಯಲಿದ್ದು, ಇದರೊಂದಿಗೆ ಆತಂಕದಲ್ಲಿದ್ದ ಭಾರತ ಮಹಿಳಾ ತಂಡಕ್ಕೆ ರಿಲೀಫ್ ಸಿಕ್ಕಂತಾಗಿದೆ.
ಸ್ಮೃತಿ ಮಂದಾನ ಭಾರತ ಮಹಿಳಾ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದು, ಪ್ರಸ್ತುತ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಜವಾಬ್ದಾರಿ ಮಂದಾನ ಅವರ ಮೇಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಮಂದಾನ, 64 ಏಕದಿನ ಪಂದ್ಯಗಳಲ್ಲಿ 2461 ರನ್‌ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಸೇರಿವೆ.