ಪ್ರಸ್ತುತ ನ್ಯೂಜಿ಼ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತೋರುತ್ತಿರುವ ಉತ್ತಮ ಪ್ರದರ್ಶನದ ನಡುವೆಯೂ ಭಾರತ ಮಹಿಳಾ ತಂಡದ ಆಟಗಾರ್ತಿಯರು, ಮಹಿಳೆಯರ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿರುವ ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್, ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 3 ಸ್ಥಾನಗಳ ಕುಸಿತ ಕಂಡಿದ್ದಾರೆ. 696 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಮಿಥಾಲಿ ರಾಜ್, 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್, ಅಲಿಸ್ಸಾ ಹೀಲಿ 731 ರೇಟಿಂಗ್ನೊಂದಿಗೆ ನಂ.1 ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ನ ಟಮ್ಮಿ ಬ್ಯೂಮಾಂಟ್ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಭರ್ಜರಿ ಫಾರ್ಮ್ನಲ್ಲಿರುವ ನ್ಯೂಜಿ಼ಲೆಂಡ್ ತಂಡದ ಪ್ರಮುಖ ಬ್ಯಾಟರ್ ಆಮಿ ಸ್ಯಾಟರ್ಥ್ವೈಟ್, 8ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಡ್ತಿಪಡೆದಿದ್ದಾರೆ.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ್ತಿ ಜುಲನ್ ಗೋಸ್ವಾಮಿ ಸಹ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಈ ಹಿಂದೆ 2ನೇ ಸ್ಥಾನದಲ್ಲಿದ್ದ ಅನುಭವಿ ಆಟಗಾರ್ತಿ, ಪ್ರಸ್ತುತ 677 ರೇಟಿಂಗ್ನಿಂದ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ 288 ರೇಟಿಂಗ್ನೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.