ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಸ್ತಾನದ ವಿರುದ್ಧ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಟೀಂ ಇಂಡಿಯಾ(Team India)ಗೆ ರೋಚಕ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿ(Virat Kohli) ICC T20I Rankings ಪಟ್ಟಿಯಲ್ಲಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆದ ರೋಚಕ ಕದನದಲ್ಲಿ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ್ದ ಕಿಂಗ್ ಕೊಹ್ಲಿ, ಏಕಾಂಗಿಯಾಗಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ತಮ್ಮ ಅದ್ಭುತ ಪ್ರದರ್ಶನದಿಂದಾಗಿ ವಿರಾಟ್ ಕೊಹ್ಲಿ, ICC T20I ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದು, ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ 14ನೇ ಸ್ಥಾನದಲ್ಲಿದ್ದ ಚೇಸ್ ಮಾಸ್ಟರ್ ಇದೀಗ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಕಳೆದ ವರ್ಷದ ಟಿ20 ವಿಶ್ವಕಪ್ ನಂತರದಲ್ಲಿ ಟಿ20 ಕ್ರಿಕೆಟ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ನವೆಂಬರ್ 2021ರಲ್ಲಿ ಮೊದಲ ಬಾರಿಗೆ ಟಾಪ್-10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಿಂದ ಹೊರಬಿದ್ದಿದ್ದರು. ಆದರೆ ನಂತರದಲ್ಲಿ ಫಾರ್ಮ್ ಕಂಡುಕೊಂಡಿದ್ದ ವಿರಾಟ್ ಕೊಹ್ಲಿ, ಈ ವರ್ಷದ ಫೆಬ್ರವರಿಯಲ್ಲಿ ಟಾಪ್-10 ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಕೊಹ್ಲಿ, ಮತ್ತೊಮ್ಮೆ ಟಾಪ್-10 ಸ್ಥಾನದಿಂದ ಕೆಳಗಿಳಿದಿದ್ದರು. ಪರಿಣಾಮ 2022ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾದ ICC T20I ಬ್ಯಾಟ್ಸಮನ್‌ಗಳ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ 35ನೇ ಸ್ಥಾನದಲ್ಲಿದ್ದರು.
2022ರ ಏಷ್ಯಾಕಪ್‌ಗೆ ಮುನ್ನ ಆಡಿದ್ದ ನಾಲ್ಕು ಟಿ20 ಪಂದ್ಯಗಳಲ್ಲಿ 81 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಶತಕ ಬಾರಿಸಿದ್ದರು. ನಂತರದಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಉತ್ತಮ ಫಾರ್ಮ್ ಕಾಯ್ದುಕೊಂಡಿದ್ದರು. ಇದೀಗ ಮೆಲ್ಬೋರ್ನ್ ಅಂಗಳದಲ್ಲಿ ಬ್ಯಾಟಿಂಗ್ ಕಮಾಲ್ ಮಾಡಿದ ವಿರಾಟ್ ಕೊಹ್ಲಿ, ICC T20I Rankingನಲ್ಲಿ ಮತ್ತೆ ಮೇಲಕ್ಕೇರುವ ಮುನ್ಸೂಚನೆ ನೀಡಿದ್ದಾರೆ.
ICC T20I Rankingನಲ್ಲಿ ಕೊಹ್ಲಿ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ಟೀಂ ಇಂಡಿಯಾದ ʼಮಿಸ್ಟರ್ 360ʼ ಖ್ಯಾತಿಯ ಸೂರ್ಯಕುಮಾರ್ ಯಾದವ್, ಟಾಪ್-3 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್(1ನೇ ಸ್ಥಾನ), ನ್ಯೂಜಿ಼ಲೆಂಡ್‌ನ ಡೆವಾನ್ ಕಾನ್ವೆ(2ನೇ ಸ್ಥಾನ) ಕಾಣಿಸಿಕೊಂಡಿದ್ದಾರೆ.
T20I ಬ್ಯಾಟಿಂಗ್ ಶ್ರೇಯಾಂಕಗಳು (ಅಕ್ಟೋಬರ್ 26ರಂತೆ)
1. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 849 ಅಂಕಗಳು
2. ಡೆವೊನ್ ಕಾನ್ವೇ (ನ್ಯೂಜಿಲೆಂಡ್) – 831 ಅಂಕಗಳು
3. ಸೂರ್ಯಕುಮಾರ್ ಯಾದವ್ (ಭಾರತ) – 828 ಅಂಕಗಳು
4. ಬಾಬರ್ ಅಜಮ್ (ಪಾಕಿಸ್ತಾನ) – 799 ಅಂಕಗಳು
5. ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) – 762 ಅಂಕಗಳು
6. ಡೇವಿಡ್ ಮಲಾನ್ (ಇಂಗ್ಲೆಂಡ್) – 754 ಅಂಕಗಳು
7. ಆರನ್ ಫಿಂಚ್ (ಆಸ್ಟ್ರೇಲಿಯಾ) – 681 ಅಂಕಗಳು
8. ಪಾತುಮ್ ನಿಸ್ಸಾಂಕ (ಶ್ರೀಲಂಕಾ) – 658 ಅಂಕಗಳು
9. ವಿರಾಟ್ ಕೊಹ್ಲಿ (ಭಾರತ) – 635 ಅಂಕಗಳು
10. ಮುಹಮ್ಮದ್ ವಸೀಮ್ (ಯುಎಇ) – 626 ಅಂಕಗಳು