ಇದು ಗ್ರೂಪ್2ರ ಮಹತ್ವದ ಪಂದ್ಯ. ಒಂದು ವೇಳೆ ಈ ಪಂದ್ಯವನ್ನು ಅಫ್ಘಾನಿಸ್ತಾನ ಗೆದ್ದರೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಆಸೆ ಮತ್ತಷ್ಟು ಕಷ್ಟವಾಗುತ್ತದೆ. ಪಾಕ್ ಈ ಪಂದ್ಯವನ್ನು ಗೆದ್ದರೆ ಸೆಮಿಫೈನಲ್ನ ಒಂದು ಸ್ಥಾನ ಬಹತೇಕ ಪಕ್ಕಾ ಆಗುತ್ತದೆ. ಹೀಗಾಗಿ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಹೋರಾಟ ನಡೆದರೂ, ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಫಲಿತಾಂಶದ ಕಡೆ ಗಮನ ಇಟ್ಟಿದೆ.
ಪಾಕಿಸ್ತಾನ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯ ಗೆದ್ದು 4 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ 130 ರನ್ಗಳ ಭರ್ಜರಿ ಜಯದಾಖಲಿಸಿ ಅದ್ಭುತ ರನ್ರೇಟ್ ಹೊಂದಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಪಾಕಿಸ್ತಾನ ಬ್ಯಾಟಿಂಗ್ನಲ್ಲಿ ಕ್ಯಾಪ್ಟನ್ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ರನ್ನು ಹೆಚ್ಚು ನೆಚ್ಚಿಕೊಂಡಿದೆ. ಮೊಹಮ್ಮದ್ ಹಫೀಝ್ ಮತ್ತು ಶೋಯೆಬ್ ಮಲಿಕ್ ಅನುಭವ ತಂಡಕ್ಕಿದೆ. ಇಮಾದ್ ವಾಸಿಂ ಮತ್ತು ಮೊಹಮ್ಮದ್ ಆರೀಫ್ ಯಾವ ಹಂತದಿಂದಾದರೂ ಪಂದ್ಯದ ಫಲಿತಾಂಶ ಬದಲಿಸಬಲ್ಲರು. ಪಾಕ್ ಬೌಲಿಂಗ್ ಅಂತೂ ಸೂಪರ್. ಶಾಹಿನ್ ಅಫ್ರಿಧಿ, ಇಮಾದ್ ವಾಸಿಂ, ಹ್ಯಾರಿಸ್ ರೌಫ್ ಮತ್ತು ಹಸನ್ ಅಲಿ ವಿಕೆಟ್ ಬೇಟೆಯಾಡುತ್ತಿದ್ದಾರೆ. ಮೊಹಮ್ಮದ್ ಹಫೀಝ್ ಮತ್ತು ಶೋಯೆಬ್ ಮಲಿಕ್ ಕೂಡ ಅಗತ್ಯ ಬಿದ್ದರೆ ಬೌಲಿಂಗ್ ಮಾಡಬಲ್ಲರು. ಹೀಗಾಗಿ ಪಾಕಿಸ್ತಾನ ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠವಾಗಿ ಕಾಣುತ್ತಿದೆ.
ಅಫ್ಘಾನಿಸ್ತಾನ ತಂಡ ವೀಕ್ ಅನ್ನುವ ಹಾಗೇ ಇಲ್ಲ. ಸ್ಪೋಟಕ ಬ್ಯಾಟ್ಸ್ಮನ್ಗಳ ದಂಡೇ ಇದೆ.ಮೊಹಮ್ಮದ್ ಶೆಹಜಾದ್, ಹಝರುತುಲ್ಲಾ ಜಜಾಯಿ ಮತ್ತು ರಹಮತುಲ್ಲಾ ಗುರ್ಬಾಜ್ ಆಟ ಹೇಗಿದೆ ಅನ್ನುವುದು ಸ್ಕಾಟ್ಲೆಂಡ್ ವಿರುದ್ಧ ಗೊತ್ತಾಗಿದೆ. ನಜಿಬುಲ್ಲಾ ಜರ್ದಾನ್, ಮೊಹಮ್ಮದ್ ನಬಿ ಮತ್ತು ಅಸ್ಗರ್ ಅಫ್ಘಾನ್ ಅನುಭವ ತಂಡಕ್ಕೆ ನೆರವಾಗಬಹುದು. ಬೌಲಿಂಗ್ನಲ್ಲೂ ಪಾಕ್ಗೆ ಸವಾಲೊಡ್ಡುವ ಅಸ್ತ್ರಗಳಿವೆ. ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಮ್ಯಾಜಿಕ್ ನಡೆದರೆ ಪಾಕ್ ಅಂದುಕೊಂಡಿದ್ದು ಉಲ್ಟಾ ಆಗಬಹುದು. ಮೊಹಮ್ಮದ್ ನಬಿ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು. ನವೀನ್ ಉಲ್ ಹಕ್ ಮತ್ತು ಗುಲ್ಬಾದಿನ್ ನಯೀಮ್ ಕೂಡ ಬೌಲಿಂಗ್ ಅಸ್ತ್ರಗಳೇ. ದುಬೈನಲ್ಲಿ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಮಾಡಿ ರಾತ್ರಿ ವೇಳೆ ಉದುರುವ ಇಬ್ಬನಿಯ ಲಾಭ ಪಡೆದುಕೊಳ್ಳುತ್ತಿದೆ. ಹೀಗಾಗಿ ಟಾಸ್ ಮೇಲೂ ಗಮನವಿದೆ. ಒಟ್ಟಿನಲ್ಲಿ ಮ್ಯಾಚ್ ಪಾಕ್ ಮತ್ತು ಅಫ್ಘಾನ್ ನಡುವೆ ನಡೆದರೂ ರಿಸಲ್ಟ್ ಮೇಲೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಅಭಿಮಾನಿಗಳ ಕಣ್ಣಿದೆ.