ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12ರ ಪಂದ್ಯಗಳು ಸಖತ್ ಇಂಟರೆಸ್ಟಿಂಗ್ ಆಗುತ್ತಿದೆ. ಅದರಲ್ಲೂ ಗ್ರೂಪ್2ರ ಪಂದ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ. ಟೀಮ್ ಇಂಡಿಯಾ ಇದೇ ಗ್ರೂಪ್ ನಲ್ಲಿ ಸ್ಥಾನ ಪಡೆದಿದೆ. ಟೀಮ್ ಇಂಡಿಯಾದ ಜೊತೆ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಸ್ಕಾಟ್ ಲೆಂಡ್ ಮತ್ತು ನಮಿಬಿಯ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಭಾರತೀಯ ಅಭಿಮಾನಿಗಳು ಈ ಗುಂಪಿನ ಲೀಗ್ ಪಂದ್ಯಗಳ ಮೇಲೆ ಹೆಚ್ಚು ಕಣ್ಣಿಟ್ಟಿದ್ದಾರೆ.
ಟೀಮ್ ಇಂಡಿಯಾ ಈಗಾಗಲೇ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿ ಮುಗಿಸಿದೆ. ಪಾಕಿಸ್ತಾನ ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಆಡಿಮುಗಿಸಿದೆ. ಸ್ಕಾಟ್ ಲೆಂಡ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಮುಗಿಸಿದೆ. ಸದ್ಯ ಪಾಕಿಸ್ತಾನ ಆಡಿರುವ ಎರಡೂ ಲೀಗ್ ಪಂದ್ಯಗಳನ್ನು ಗೆದ್ದಿದೆ. ಅಫ್ಘಾನಿಸ್ತಾನ ಸ್ಕಾಟ್ಲೆಂಡ್ ವಿರುದ್ಧ ಗೆದ್ದಿದೆ. ನಮಿಬಿಯಾ ಒಂದೂ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ಗ್ರೂಪ್ ನ ಉಳಿದ ಲೀಗ್ ಪಂದ್ಯಗಳು ಸಖತ್ ಇಂಟರೆಸ್ಟಿಂಗ್ ಆಗಿರಲಿದೆ.
ಪಾಕಿಸ್ತಾನ ಮುಂದಿನ ಪಂದ್ಯಗಳನ್ನು ಅಫ್ಘಾನ್, ನಮಿಬಿಯಾ ಮತ್ತು ಸ್ಕಾಟ್ ಲೆಂಡ್ ವಿರುದ್ಧ ಆಡಲಿದೆ. ಇದು ಪಾಕ್ ತಂಡಕ್ಕೆ ಸುಲಭ ಎದುರಾಳಿಗಳು. ಹೀಗಾಗಿ ಗ್ರೂಪ್ 2 ರಲ್ಲಿ ಅಗ್ರಸ್ಥಾನ ಬಹುತೇಕ ಗ್ಯಾರೆಂಟಿ. ಸೆಮಿಫೈನಲ್ ಗೇರುವ ಇನ್ನೊಂದು ತಂಡ ಯಾವುದು ಅನ್ನುವ ಲೆಕ್ಕಾಚಾರ ಜೋರಾಗುತ್ತಿದೆ. ಟೀಮ್ ಇಂಡಿಯಾ ಅಕ್ಟೋಬರ್ 29 ರಂದು ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಆಡಲಿದೆ. ಅದಾದ ಮೇಲೆ ಅಫ್ಘಾನಿಸ್ತಾನ, ಸ್ಕಾಟ್ ಲೆಂಡ್ ಮತ್ತು ನಮೀಬಿಯಾ ವಿರುದ್ಧ ಪಂದ್ಯ ಆಡಲಿದೆ. ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯ ಟೀಮ್ ಇಂಡಿಯಾದ ವಿಶ್ವಕಪ್ ಭವಿಷ್ಯವನ್ನು ನಿರ್ಧಾರ ಮಾಡಲಿದೆ.
ಮತ್ತೊಂದು ಕಡೆಯಲ್ಲಿ ನ್ಯೂಜಿಲೆಂಡ್ಗೂ ಟೀಮ್ ಇಂಡಿಯಾ ವಿರುದ್ಧದ ಪಂದ್ಯ ನಿರ್ಣಾಯಕವಾಗಲಿದೆ. ಈ ಪಂದ್ಯವನ್ನು ಗೆದ್ದವರು ಬಹುತೇಕ ಸೆಮಿಫೈನಲ್ ಆಡುವುದು ಖಚಿತವಾಗಲಿದೆ. ಯಾಕಂದ್ರೆ ನ್ಯೂಜಿಲೆಂಡ್ ಕೂಡ ತನ್ನ ಕಡೆಯ 3 ಪಂದ್ಯಗಳನ್ನು ಅಫ್ಘಾನ್, ನಮಿಬಿಯಾ ಮತ್ತು ಸ್ಕಾಟ್ ಲೆಂಡ್ ವಿರುದ್ಧ ಆಡಲಿದೆ.
ಇದೆಲ್ಲಾ ಲೆಕ್ಕಾಚಾರವನ್ನು ಹೊರತು ಪಡಿಸಿ ಅಫ್ಘಾನ್ ತಂಡ ಇನ್ನೆರಡು ಗೆಲುವಿನ ಬಗ್ಗೆ ಯೋಚನೆ ಮಾಡುತ್ತಿದೆ. ಟೀಮ್ ಇಂಡಿಯಾ ಅಥವಾ ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳ ಪೈಕಿ ಒಂದನ್ನು ಗೆದ್ದರೂ ಅಫ್ಘಾನ್ ಸೆಮಿಫೈನಲ್ ಆಸೆ ದೊಡ್ಡದಾಗಲಿದೆ. ಯಾಕಂದರೆ ನಮಿಬಿಯಾ ವಿರುದ್ಧ ಅಫ್ಘಾನ್ ಸುಲಭವಾಗಿ ಗೆಲ್ಲಬಹುದು ಅನ್ನುವ ಲೆಕ್ಕಾಚಾರವಿದೆ. ಒಟ್ಟಿನಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆದ್ದಿದ್ದು ಗ್ರೂಪ್ 2ರ ಎಲ್ಲಾ ಲೆಕ್ಕಾಚಾರಗಳನ್ನು ಸ್ಪಷ್ಟವಾಗುವಂತೆ ಮಾಡಿದೆ.