IPL auction 2022 – ಸ್ಟಾರ್ಕ್ ಐಪಿಎಲ್ ನಿಂದ ಹಿಂದೇಟು.. ಕಾರಣ ಏನು ?
ಆಸ್ಟ್ರೇಲಿಯಾದ ವೇಗಿ ಮಿಟ್ಚೆಲ್ ಸ್ಟಾರ್ಕ್ ಅವರು 15ನೇ ಆವೃತ್ತಿಯ ಐಪಿಎಲ್ ನಿಂದ ಹೊರಗುಳಿಯುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಕೊನೆಯ ಕ್ಷಣದಲ್ಲಿ ಐಪಿಎಲ್ ಬಿಡ್ಡಿಂಗ್ ನಿಂದ ಮಿಟ್ಚೆಲ್ ಸ್ಟಾರ್ಕ್ ಹೊರಬಂದಿದ್ದಾರೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಮಾರ್ಚ್ 27ರಿಂದ ಐಪಿಎಲ್ ಟೂರ್ನಿ ಶುರುವಾಗುವ ಸಾಧ್ಯತೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಮಿಟ್ಚೆಲ್ ಸ್ಟಾರ್ಕ್ ಅವರು 2018ರಲ್ಲಿ ಕೆಕೆಆರ್ ತಂಡಕ್ಕೆ 9.4 ಕೋಟಿ ರೂಪಾಯಿಗೆ ಸೇರಿಕೊಂಡಿದ್ದರು. ಐಪಿಎಲ್ ನ ಎರಡು ಆವೃತ್ತಿಗಳಲ್ಲಿ ಆಡಿರುವ ಸ್ಟಾರ್ಕ್ ಅವರು, 27 ಪಂದ್ಯಗಳಲ್ಲಿ 37 ವಿಕೆಟ್ ಗಳನ್ನು ಕಬಳಿಸಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಾಯಗೊಂಡ ಕಾರಣ ಮಿಟ್ಚೆಲ್ ಸ್ಟಾರ್ಕ್ ಅವರು ಕೆಕೆಆರ್ ತಂಡದ ಪರವೂ ಆಡಿರಲಿಲ್ಲ.
ಕೊನೆಯ ಕ್ಷಣದಲ್ಲಿ ಐಪಿಎಲ್ ಬಿಡ್ಡಿಂಗ್ ನಿಂದ ಹೊರಬರುತ್ತಿದ್ದೇನೆ. ನನಗೆ 22 ವಾರಗಳ ಕಾಲ ಬಯೋಬಬಲ್ ನಲ್ಲಿ ಇರಲು ಸಾಧ್ಯವಿಲ್ಲ ಎಂದು ಮಿಟ್ಚೆಲ್ ಸ್ಟಾರ್ಕ್ ಹೇಳಿದ್ದಾರೆ.
32ರ ಹರೆಯದ ಮಿಟ್ಚೆಲ್ ಸ್ಡಾರ್ಕ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಸುಳಿವನ್ನು ನೀಡಿದ್ದಾರೆ.
ಮಿಟ್ಚೆಲ್ ಸ್ಟಾರ್ಕ್ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ವಿಕೆಟ್ ಸಿಗುತ್ತಿಲ್ಲ. ದುಬಾರಿಯಾಗಿ ರನ್ ಕೂಡ ಬಿಟ್ಟು ಕೊಡುತ್ತಿದ್ದಾರೆ. 2020-21ರ ಭಾರತ ವಿರುದ್ದದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಭಾರತ ವಿರುದ್ದ ಅವರು 40.72ರ ಸರಾಸರಿಯಲ್ಲಿ 11 ವಿಕೆಟ್ ಉರುಳಿಸಿದ್ದರು. ಇದೇ ವೇಳೆ ಕಳೆದ ವರ್ಷ ಮಿಟ್ಚೆಲ್ ಸ್ಟಾರ್ಕ್ ಅವರು ತನ್ನ ತಂದೆಯನ್ನು ಕೂಡ ಕಳೆದುಕೊಂಡಿದ್ದರು.
ಇನ್ನು ಯುಎಇ ನಲ್ಲಿ ನಡೆದ 2021ರ ವಿಶ್ವಕಪ್ ಫೈನಲ್ ನಲ್ಲಿ ಸ್ಟಾರ್ಕ್ ಅವರು ನಾಲ್ಕು ಓವರ್ ಗಳಲ್ಲಿ ಒಂದು ವಿಕೆಟ್ ಪಡೆಯದೆ 60 ರನ್ ನೀಡಿ ದುಬಾರಿಯಾಗಿದ್ದರು.
ಆದ್ರೆ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ದದ ಆಶಷ್ ಸರಣಿಯಲ್ಲಿ ಸ್ಟಾರ್ಕ್ ಅವರು 25.37 ಸರಾಸರಿಯಲ್ಲಿ ಐದು ಟೆಸ್ಟ್ ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದರು.
ಇದೀಗ ಮಿಟ್ಚೆಲ್ ಸ್ಟಾರ್ಕ್ ಅವರು ಶ್ರೀಲಂಕಾ ವಿರುದ್ದದ ಟಿ-20 ಸರಣಿ ಮತ್ತು ಪಾಕಿಸ್ತಾನ ವಿರುದ್ದದ ಸರಣಿಯನ್ನು ಎದುರು ನೋಡುತ್ತಿದ್ದಾರೆ.