ಟೀಮ್ ಇಂಡಿಯಾದ ಮಾಸ್ಟರ್ ಪೀಸ್ ಜೋಡಿಗಳಾಗಿದ್ದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಹೊಸ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕ್ರಿಕೆಟ್ ಬದುಕು ಮುಗಿಸಿರುವ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಟರ್ಬನೇಟರ್ ಹರ್ಭಜನ್ ಸಿಂಗ್ ಪಂಜಾಬ್ ಚುನಾವಣಾ ಅಖಾಡಕ್ಕೆ ಇಳಿಯು ಸಾಧ್ಯತೆಗಳು ಇವೆ ಎನ್ನಲಾಗಿದೆ.
ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಭಾರತೀಯ ಜನತಾ ಪಾರ್ಟಿ ಕೆಲವು ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇವರು ಒಪ್ಪಿದರೆ ಟಿಕೆಟ್ ನೀಡುವ ಯೋಚನೆಯೂ ಬಿಜೆಪಿಗಿದೆ. ಒಂದು ವೇಳೆ ಚುನಾವಣಾ ಸ್ಪರ್ಧೆಗೆ ಒಪ್ಪದೇ ಇದ್ದರೆ ಸ್ಟಾರ್ ಪ್ರಚಾರಕರನ್ನಾಗಿ ಮಾಡಲು ಕೂಡ ಮಾಸ್ಟರ್ ಪ್ಲಾನ್ ನಡೆಯುತ್ತಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 117 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಪಕ್ಷವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಅಂತಿಮ ಕ್ಷಣದಲ್ಲಿ ನಿರ್ಧಾರ ಬದಲಾಗಬಹುದು. 2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಬಹುಮತವನ್ನು ಪಡೆದಿತ್ತು. 10 ವರ್ಷಗಳ ನಂತರ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿತ್ತು. ಈಗ ಬಿಜೆಪಿ ಮರಳಿ ಅಧಿಕಾರ ಪಡೆಯುವ ಕನಸು ಕಾಣುತ್ತಿದೆ ಅದಕ್ಕಾಗಿ ಪ್ರಯತ್ನ ತೀವ್ರಗೊಳಿಸಿದೆ.