ವಿರಾಟ್ ಕೊಹ್ಲಿ.. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಇದೀಗ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿಯೂ ಹೊರಹೊಮ್ಮಿರುವ ಕ್ರಿಕೆಟಿಗ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತರ ಭಾರತೀಯರು ಹೆಚ್ಚು ಆರಾಧಿಸುವ ಕ್ರಿಕೆಟಿಗ. ರನ್ ಸರದಾರ.. ದಾಖಲೆಗಳ ಶೂರನಾಗಿ ಹೊರಹೊಮ್ಮಿರುವ ವಿರಾಟ್ ಕೊಹ್ಲಿಗೆ ಜನ್ಮದಿನ ಸಂಭ್ರಮ.
ತೆಂಡೂಲ್ಕರ್ ಬಳಿಕ ಟೀಮ್ ಇಂಡಿಯಾ ಕಂಡ ಬಹುದೊಡ್ಡ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. 1988ರ ನವೆಂಬರ್ 5ರ ರಂದು ಕೊಹ್ಲಿ ದೆಹಲಿಯಲ್ಲಿ ಜನಿಸಿದ್ದರು. ಸದ್ಯ ವಿಶ್ವಕಪ್ ಟೂರ್ನಿಗಾಗಿ ಆಸ್ಟ್ರೇಲಿಯಾದಲ್ಲಿರುವ ಕೊಹ್ಲಿ, ಅಲ್ಲಿಯೇ ಪತ್ನಿ ಅನುಷ್ಕಾ ಹಾಗೂ ಮಗಳೊಂದಿಗೆ ತನ್ನ 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು, 2008ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ. ಅಂದಿನಿಂದ ಇಂದಿನವರೆಗೆ ಕೊಹ್ಲಿ 14 ವರ್ಷಗಳ ವೃತ್ತಿಬದುಕಿನಲ್ಲಿ ವರ್ಣರಂಜಿತ ಕ್ಷಣಗಳನ್ನು ಕಳೆದಿದ್ದಾರೆ. ಭಾರತ ಪರ ಕೊಹ್ಲಿ 102 ಪಂದ್ಯಗಳಲ್ಲಿ 8,074 ರನ್, 262 ಏಕದಿನ ಪಂದ್ಯಗಳಲ್ಲಿ 12,344 ರನ್, 113 ಟಿ20 ಪಂದ್ಯಗಳಲ್ಲಿ 3,932 ರನ್ ದಾಖಲೆ ಹೊಂದಿದ್ದಾರೆ.
ವೃತ್ತಿ ಬದುಕಿನಲ್ಲಿ ಕೊಹ್ಲಿಯೂ ಏಳು ಬೀಳುಗಳನ್ನು ಕಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಬ್ಯಾಟಿಂಗ್ ವೈಫಲ್ಯ, ಶತಕದ ಬರ ಎದುರಿಸಿದ್ದ ಕೊಹ್ಲಿ ಈ ಬಾರಿಯ ಏಷ್ಯಾಕಪ್ ಮೂಲಕ ಬಲಿಷ್ಠ ಕಮ್ಬ್ಯಾಕ್ ಮಾಡಿದ್ರು. ಬರೋಬ್ಬರಿ 1,019 ದಿನಗಳ ಬಳಿಕ ತನ್ನ 71ನೇ ಶತಕ ಬಾರಿಸಿದ್ದ ಕೊಹ್ಲಿ ತನ್ನ ವಿರುದ್ಧದ ಟೀಕೆ, ಅವಮಾನಗಳಿಗೆಲ್ಲ ಉತ್ತರಿಸಿದ್ರು. ಅಲ್ಲಿಂದ ಮತ್ತೆ ಲಯಕ್ಕೆ ಮರಳಿರುವ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಬ್ಯಾಟಿಂಗ್ ವೈಭವ ಮುಂದುವರೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಆಡಿದ ಪಂದ್ಯಗಳಲ್ಲಿ ಕ್ರಮವಾಗಿ 82, 62, 12 ಮತ್ತು 64 ರನ್ ಬಾರಿಸಿರುವ ಕೊಹ್ಲಿ, ನಾಳೆ ನಡೆಯುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ಆರ್ಭಟ ನಡೆಸೋ ಎಲ್ಲಾ ಸಾಧ್ಯತೆಗಳಿವೆ..
‘ಕ್ರಿಕೆಟ್ ದೇವರು’ ಬಳಿಕ ಕೊಹ್ಲಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಕ್ರಿಕೆಟ್ ಅಂಗಳದಲ್ಲಿ ಕೊಹ್ಲಿ ವೀರಾವೇಶದ ಹೋರಾಟಗಳನ್ನು ನಡೆಸಿದ, ಅಪ್ಪಟ ರಾಜನಾಗಿ ಅಬ್ಬರಿಸಿದ ಅದೆಷ್ಟೋ ನಿದರ್ಶನಗಳಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕ್ರೀಡಾ ಸ್ಫೂರ್ತಿ, ಅಭಿಮಾನಿಗಳಿಗೆ ತೋರುವ ಪ್ರೀತಿ-ಗೌರವ, ಮಾನವೀಯ ಗುಣಗಳಿಗಾಗಿ ಕೊಹ್ಲಿ ಅಭಿಮಾನಿಗಳ ಬಳಗ ಹಿರಿದಾಗುತ್ತಲೇ ಇದೆ. ಏಕದಿನ ವಿಶ್ವಕಪ್ನಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿದ ಏಕಮಾತ್ರ ಭಾರತೀಯ, ಏಕದಿನದಲ್ಲಿ ವೇಗವಾಗಿ 8, 9, 10,11 ಮತ್ತು 12 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್. ಟಿ20 ವಿಶ್ವಕಪ್ನಲ್ಲಿ 2 ಬಾರಿ ‘ಮ್ಯಾನ್ ಆಫ್ ಟೂರ್ನಮೆಂಟ್’ ಗೆದ್ದಿರುವ ವಿಶ್ವದ ಏಕಮಾತ್ರ ಕ್ರಿಕೆಟರ್ ಹೀಗೆ ಕೊಹ್ಲಿ ಹೆಸರಿನಲ್ಲಿ ನೂರಾರು ದಾಖಲೆಗಳಿವೆ.
ಇದನ್ನೂ ಓದಿ – https://sportskarnataka.com/virat-birthday-m…es-to-his-freind/