ಐಪಿಎಲ್ ಟೂರ್ನಿಗೆ ಹೊಸದಾಗಿ ಎಂಟ್ರಿಕೊಟ್ಟಿರುವ ಗುಜರಾತ್ ಟೈಟನ್ಸ್, ತನ್ನ ಎರಡನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಚುಟುಕು ಕ್ರಿಕೆಟ್ ಸಮರದಲ್ಲಿ ತನ್ನ ಪರಾಕ್ರಮ ತೋರುತ್ತಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ನಲ್ಲಿ 171/6 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ ಕೇವಲ 157/9 ರನ್ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 14 ರನ್ಗಳ ಗೆಲುವು ಸಾಧಿಸಿದ ಗುಜರಾತ್, 2022ರ ಐಪಿಎಲ್ನಲ್ಲಿ ಸತತ 2ನೇ ಗೆಲುವು ದಾಖಲಿ, ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೇರಿತು.
ಡೆಲ್ಲಿ ಬ್ಯಾಟಿಂಗ್ ವೈಫಲ್ಯ:
ಗುಜರಾತ್ ನೀಡಿದ 172 ರನ್ಗಳ ಟಾರ್ಗೆಟ್ ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಇನ್ನಿಂಗ್ಸ್ ಆರಂಭದಲ್ಲೇ ಪೃಥ್ವಿ ಶಾ(10), ಟಿಮ್ ಸೈಫರ್ಟ್(3) ಹಾಗೂ ಮನ್ದೀಪ್ ಸಿಂಗ್(18) ವಿಕೆಟ್ ಕಳೆದುಕೊಂಡಿತು. ನಂತರ ಕಣಕ್ಕಿಳಿದ ನಾಯಕ ರಿಷಬ್ ಪಂತ್(43), ಲಲಿತ್ ಯಾದವ್(25) ಹಾಗೂ ರೊವ್ಮನ್ ಪೊವೆಲ್(20) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಆದರೆ ಕೆಳಕ್ರಮಾಂಕದಲ್ಲಿ ಬಂದ ಆಟಗಾರರು ತಂಡಕ್ಕೆ ಆಸರೆಯಾಗಲಿಲ್ಲ.
ಫೆರ್ಗುಸನ್ ಮಾರಕ ದಾಳಿ
ಗುಜರಾತ್ ಪರ ಲೊಕ್ಕಿ ಫೆರ್ಗುಸನ್(4/28) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಡೆಲ್ಲಿ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದ ಫೆರ್ಗುಸನ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಶಮಿ(2/30), ಹಾರ್ದಿಕ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
ಟೈಟನ್ಸ್ಗೆ ಗಿಲ್ ಆಸರೆ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ಗೆ ಶುಭ್ಮನ್ ಗಿಲ್(84) ಆಸರೆಯಾದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಕೇವಲ 46 ಬಾಲ್ನಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ ಭರ್ಜರಿ 84 ರನ್ಗಳಿಸಿ ಮಿಂಚಿದರು. ಇವರಿಗೆ ನಾಯಕ ಹಾರ್ದಿಕ್ ಪಾಂಡ್ಯ(31), ಡೇವಿಡ್ ಮಿಲ್ಲರ್(20*) ಸಾಥ್ ನೀಡಿದರು. ಪರಿಣಾಮ ಗುಜರಾಜ್, 20 ಓವರ್ನಲ್ಲಿ 171/6 ರನ್ಗಳಿಸಿತು. ಡೆಲ್ಲಿ ಪರ ಮುಸ್ತಫಿಜು಼ರ್ ರಹಮಾನ್ 3/23, ಖಲೀದ್ ಅಹ್ಮದ್ 2/34 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.