ಭರ್ಜರಿ ಆಟದ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ 36-33 ರಿಂದ ಯು-ಮುಂಬಾ ತಂಡವನ್ನು ಮಣಿಸಿ ಟೂರ್ನಿಯಲ್ಲಿ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಶನಿವಾರ ನಡೆದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 131ನೇ ಪಂದ್ಯದಲ್ಲಿ ಗುಜರಾತ್ ಜಯ ಸಾಧಿಸಿ ಅಬ್ಬರಿಸಿತು. ಈ ಜಯದ ಮೂಲಕ ಟೂರ್ನಿಯಲ್ಲಿ ಗುಜರಾತ್ 10ನೇ ಜಯ ದಾಖಲಿಸಿದೆ. ಅಲ್ಲದೆ 67 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಯು-ಮುಂಬಾ ಟೂರ್ನಿಯಲ್ಲಿ 10ನೇ ಸೋಲು ಕಂಡಿದ್ದು 10ನೇ ಸ್ಥಾನದಲ್ಲಿದೆ.
ಜೈಂಟ್ಸ್ ತಂಡ ಮೊದಲಾವಧಿಯ ಆಟದಲ್ಲಿ ಮನಮೋಹಕ ಆಟವಾಡಿತು. ಅಲ್ಲದೆ 20-14ರ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಗುಜರಾತ್ ದಾಳಿಯಲ್ಲಿ 14 ಅಂಕ ಸೇರಿಸಿದರೆ, ಎದುರಾಳಿ ತಂಡ 11 ಅಂಕ ಸೇರಿಸಿತು. ಈ ಅವಧಿಯಲ್ಲಿ ಮುಂಬಾ ತಂಡ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಮುಂಬಾ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರೂ ಜಯ ಸಾಧಿಸುವಲ್ಲಿ ವಿಫಲವಾಯಿತು. ಈ ಅವಧಿಯಲ್ಲಿ ಮುಂಬಾ 19-16ರಿಂದ ಮುನ್ನಡೆಯಿತು. ದಾಳಿಯಲ್ಲಿ ಮುಂಬಾ 11 ಅಂಕ ಸೇರಿಸಿತು. ಜೈಂಟ್ಸ್ 7 ಅಂಕ ಸೇರಿಸಿತು. ಉಭಯ ತಂಡಗಳು ಈ ಅವಧಿಯಲ್ಲಿ ತಲಾ ಒಂದು ಬಾರಿ ಆಲೌಟ್ ಆದವು.
ಗುಜರಾತ್ ಪರ ರಾಕೇಶ್ 13, ಮಹೇಂದ್ರ ರಜಪೂತ್ 7, ರಕ್ಷಣಾ ಆಟಗಾರ ಗಿರೀಶ್ ಮಾರುತಿ 5 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು.