ಬಿಬಿಎಲ್ ನಲ್ಲಿ ರನ್ ಸುನಾಮಿಯಾದ ಗ್ಲೇನ್ ಮ್ಯಾಕ್ಸ್ ವೆಲ್.. ದಾಖಲೆಯ ಶತಕದ ಸಂಭ್ರಮದಲ್ಲಿ ಮ್ಯಾಕ್ಸಿ..!
ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಹೊಸ ಇತಿಹಾಸ ಬರೆದಿದ್ದಾರೆ.
ಹೊಬಾರ್ಟ್ ಹರಿಕೇನ್ಸ್ ವಿರುದ್ಧ ಬಿರುಗಾಳಿಯಂತೆ ಬ್ಯಾಟ್ ಬೀಸಿದ ಗ್ಲೇನ್ ಮ್ಯಾಕ್ಸ್ ವೆಲ್ ಶತಕದ ಸಂಭ್ರಮದಲ್ಲಿ ತೇಲಾಡಿದ್ದಾರೆ.
ಮೆಲ್ಬರ್ನ್ ಸ್ಟಾರ್ಸ್ ತಂಡದ ಗ್ಲೇನ್ ಮ್ಯಾಕ್ಸ್ ವೆಲ್ ಅವರು 41 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ. ಈ ಮೂಲಕ ಬಿಬಿಎಲ್ ನಲ್ಲಿ ಅತೀ ವೇಗವಾಗಿ ಶತಕ ದಾಖಲಿಸಿದ್ದ ಎರಡನೇ ಆಟಗಾರನಾಗಿ ಮ್ಯಾಕ್ಸ್ ವೆಲ್ ಹೊರಹೊಮ್ಮಿದ್ದಾರೆ. ಈ ಹಿಂದೆ ಸಿಮೊನ್ಸ್ ಅವರು 39 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.
ಶತಕದ ನಂತರವೂ ಆರ್ಭಟಿಸಿದ್ದ ಮ್ಯಾಕ್ಸ್ ವೆಲ್ ಕೇವಲ 64 ಎಸೆತಗಳಲ್ಲಿ ಅಜೇಯ 154 ರನ್ ದಾಖಲಿಸಿದ್ದಾರೆ. ಇದರೊಂದಿಗೆ ಬಿಬಿಎಲ್ ನಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ದಾಖಲಿಸಿದ್ದ ಗೌರವಕ್ಕೂ ಪಾತ್ರರಾಗಿದ್ದಾರೆ.
20 ಎಸೆತಗಳಲ್ಲಿ ಅರ್ಧಶತಕ, 41 ಎಸೆತಗಳಲ್ಲಿ ಶತಕ, 64 ಎಸೆತಗಳಲ್ಲಿ 154 ರನ್ ಸಿಡಿಸಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಮಹೋನ್ನತ ಇನಿಂಗ್ಸ್ ನಲ್ಲಿ 22 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳಿದ್ದವು.
ಬಿಬಿಎಲ್ ನಲ್ಲಿ ನೂರನೇ ಪಂದ್ಯವನ್ನಾಡುತ್ತಿರುವ ಮ್ಯಾಕ್ಸ್ ವೆಲ್ ಅವರು ಹೊಬರ್ಟ್ ಹರಿಕೇನ್ಸ್ ತಂಡದ ಬೌಲರ್ ಗಳ ಬೆವರಿಳಿಸಿದ್ದರು. ಇದರೊಂದಿಗೆ ಮೆಲ್ಬರ್ನ್ ಸ್ಟಾರ್ಸ್ ತಂಡ 2 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತ್ತು. ಇದು ಕೂಡ ಬಿಬಿಎಲ್ ನಲ್ಲಿ ತಂಡವೊಂದು ಗಳಿಸಿರುವ ಗರಿಷ್ಠ ಸಂಖ್ಯೆಯ ರನ್‍ಗಳು.
ಇನ್ನೊಂದೆಡೆ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಸ್ಪೋಟಕ ಆಟಕ್ಕೆ ಮಾರ್ಕಸ್ ಸ್ಟೋನಿಸ್ ಅವರು ಕೂಡ ಉತ್ತಮ ಸಾಥ್ ನೀಡಿದ್ರು. 31 ಎಸೆತಗಳಲ್ಲಿ 75 ರನ್ ದಾಖಲಿಸಿದ್ದ ಸ್ಟೋನಿಸ್ ಅವರು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಅಬ್ಬರಕ್ಕೆ ಮತ್ತಷ್ಟು ಹುರುಪನ್ನು ನೀಡಿದ್ರು.
Glenn Maxwell Masterclass: Slams 64-ball 154 as records
ಗ್ಲೇನ್ ಮ್ಯಾಕ್ಸ್ ವೆಲ್ ಅವರ ಮನಮೋಹಕ ಆಟಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.
ಆಸ್ಟ್ರೇಲಿಯಾದ ಆಲ್ ರೌಂಡರ್ ಆಗಿರುವ ಮ್ಯಾಕ್ಸ್ ವೆಲ್ ಅವರು ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಪರ ಕೂಡ ಆಡಿದ್ದರು. ಆಗ ಸೆಹ್ವಾಗ್, ಗಂಭೀರ್ ಮ್ಯಾಕ್ಸ್ ವೆಲ್ ಆಟಕ್ಕೆ ಟೀಕೆ ಮಾಡಿದ್ದರು.