ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ನಿರಾಸೆ ಅನುಭವಿಸಿದೆ. ಆದರೆ, ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುತ್ತಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ಫಾಫ್ ಡುಪ್ಲೇಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ತಮ್ಮ ನೈಜ ಆಟವನ್ನು ಆಡಿ ತಂಡಕ್ಕೆ ನೆರವಾದರು. ಇವರು ಅಜೇಯ 41 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದರು.
ಭಾನುವಾರ ನಡೆದ ಡಬಲ್ ಹೆಡರ್ ನ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡ ಪಂಜಾಬ್ ಎದುರು ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ತಂಡವು ನಾಯಕ ಡು ಪ್ಲೆಸಿಸ್ ಅವರ ಬಿರುಸಿನ ಅರ್ಧಶತಕ ಮತ್ತು ಕೊಹ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ನ ಬಲದಿಂದ 200 ಕ್ಕೂ ಹೆಚ್ಚು ರನ್ ಗಳಿಸಿತು. ನಾಯಕ 57 ಎಸೆತಗಳಲ್ಲಿ 88 ರನ್ ಗಳಿಸಿದರೆ, ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿದರು. ಮಾಜಿ ನಾಯಕನ ಬ್ಯಾಟ್ನಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ಗಳು ಸೇರಿವೆ. ಅಲ್ಲದೆ ಅವರು 141 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ವಾರ್ನರ್ ಟಿ-20 ಕ್ರಿಕೆಟ್ನಲ್ಲಿ 10,308 ರನ್ ಗಳಿಸಿದ್ದಾರೆ. ಪಂಜಾಬ್ ವಿರುದ್ಧದ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇಸಿಂಗ್ ಸ್ಟಾರ್ ವಾರ್ನರ್ ದಾಖಲೆಯನ್ನು ಅಳಿಸಿದರು. ಆರ್ಸಿಬಿಯ ಮಾಜಿ ನಾಯಕ ಈಗ 327 ಟಿ20 ಪಂದ್ಯಗಳಲ್ಲಿ 10,314 ರನ್ ಗಳಿಸಿದ್ದಾರೆ. ಇದರಲ್ಲಿ ಐಪಿಎಲ್ನಲ್ಲಿ ಅವರು ಗಳಿಸಿದ 5 ಶತಕಗಳು ಸೇರಿವೆ.
ವೆಸ್ಟ್ ಇಂಡೀಸ್ನ ದಿಗ್ಗಜ ಕ್ರಿಸ್ ಗೇಲ್ ಅತಿ ಹೆಚ್ಚು ಟಿ20 ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 463 ಪಂದ್ಯಗಳಲ್ಲಿ ಇವರು 22 ಶತಕಗಳೊಂದಿಗೆ 14,562 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಇದ್ದಾರೆ. ಇವರು 11698 ರನ್ ಸಿಡಿಸಿದ್ದಾರೆ. ಇದರ ನಂತರ ವೆಸ್ಟ್ ಇಂಡೀಸ್ನ ಕೀರಾನ್ ಪೊಲಾರ್ಡ್ 11,430 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.