ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷದ ಬಿಸಿ ಇದೀಗ ಕ್ರೀಡಾ ಕ್ಷೇತ್ರಕ್ಕೂ ತಟ್ಟಿದ್ದು, ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಕಠೋರವಾಗಿ ಪ್ರತಿಕ್ರಿಯಿಸಿರುವ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಮತ್ತು ಯೂರೋಪಿಯನ್‌ನ ಯುಇಎಫ್‌ಇ, ರಷ್ಯಾ ಹಾಗೂ ರಷ್ಯಾದ ಫುಟ್ಬಾಲ್ ಕ್ಲಬ್ ತಂಡಗಳನ್ನ ಮುಂದಿನ ಆದೇಶದವರೆಗೂ ಅಮಾನತುಗೊಳಿಸಿದೆ.
ಅಲ್ಲದೇ ಈ ನಿರ್ಧಾರ ಇದೇ ವರ್ಷ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಷ್ಯಾದ ಭಾಗವಹಿಸುವಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮತ್ತೊಂದೆಡೆ ಪೋಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ರಷ್ಯಾ ವಿರುದ್ಧ ಆಡಲು ನಿರಾಕರಿಸುತ್ತಿವೆ. ಯುಇಎಫ್‌ಎ ರಷ್ಯಾದ ಇಂಧನ ಕಂಪನಿಯಾಗಿರುವ ಗಜ್ಸ್‌ಪ್ರೋಮ್ ಜೊತೆಗಿನ ಪ್ರಾಯೋಜಕತ್ವದ ಒಪ್ಪಂದವನ್ನು ಸಹ ಕೊನೆಗೊಳಿಸಿದೆ.
ಇದಕ್ಕೂ ಮುನ್ನ ರಷ್ಯಾ ಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಬಳಸದೆ ಫುಟ್ಬಾಲ್ ಆಡಲು ಫಿಫಾ ಆದೇಶಿಸಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಫಿಫಾ, ರಷ್ಯಾ ಹಾಗೂ ರಷ್ಯಾದ ಫುಟ್ಬಾಲ್ ಕ್ಲಬ್ ತಂಡಗಳನ್ನ ಮುಂದಿನ ಆದೇಶದವರೆಗೂ ಅಮಾನತುಗೊಳಿಸಿದೆ. ಫುಟ್ಬಾಲ್ ಕ್ರೀಡೆಯಲ್ಲಿ ರಷ್ಯಾ ತನ್ನದೇ ಛಾಪು ಮೂಡಿಸಿದ್ದು, 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ರಷ್ಯಾ ಆಯೋಜಿಸಿತ್ತು.
ಮತ್ತೊಂದೆಡೆ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಸಹ ರಷ್ಯಾವನ್ನು ಪ್ರತ್ಯೇಕಿಸಲು ಮುಂದಾಗಿದೆ. ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯು ಪ್ರಮುಖ ಪಂದ್ಯಾವಳಿಗಳಿಂದ ರಷ್ಯಾ ಮತ್ತು ಬೆಲೋರುಷ್ಯನ್ ಅಥ್ಲಿಟ್‌ಗಳ ಮೇಲೆ ನಿಷೇಧ ಹೇರಿದೆ.