ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಆಘಾತ ಎದುರಾಗಿದ್ದು, ತಂಡದ ಆಲ್ರೌಂಡರ್ ಫಹೀಮ್ ಅಶ್ರಫ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಕರಾಚಿಯ ಹೋಟೆಲ್ಗೆ ಆಗಮಿಸಿದ್ದ ವೇಳೆ ಫಹೀಮ್ ಅಶ್ರಫ್ಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಸದ್ಯ ಫಹೀಮ್ ಅಶ್ರಫ್ ಐದು ದಿನಗಳವರೆಗೆ ಐಸೊಲೇಷನ್ನಲ್ಲಿ ಇರಲಿದ್ದು, ಇವರ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈವರೆಗೂ ಯಾವುದೇ ಹೆಸರನ್ನು ಸೂಚಿಸಿಲ್ಲ.
ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಫಹೀಮ್ ಅಶ್ರಫ್, ಆಸೀಸ್ ವಿರುದ್ಧದ 2ನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ವೇಳೆ ಗಾಯದ ಸಮಸ್ಯೆಯಿಂದ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಫಹೀಮ್ ಅಶ್ರಫ್, ಇದೀಗ 2ನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯ ಮಾ.12 ರಿಂದ 16ರವರೆಗೆ ಕರಾಚಿಯಲ್ಲಿ ನಡೆಯಲಿದೆ.