ಇಂಗ್ಲೆಂಡ್ ಶುಕ್ರವಾರ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನು ಮಾಡಿದೆ. ಅಲ್ಲದೆ ತನ್ನದೇ ಗರಿಷ್ಠ ಮೊತ್ತದ ದಾಖಲೆಯನ್ನು ಸುಧಾರಿಸಿಕೊಂಡಿದೆ.
ನೆದರ್ಲೆಂಡ್ಸ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಅಬ್ಬರದ ಆಟದ ಪ್ರದರ್ಶನ ನೀಡಿ ಅಬ್ಬರಿಸಿತು. ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಗೆ 498 ರನ್ ಸೇರಿಸಿತು. ಇಂಗ್ಲೆಂಡ್ ತಂಡದ ಪರ ಸ್ಟಾರ್ ಆಟಗಾರರಾದ ಫಿಲ್ ಸಾಲ್ಟ್, ಡೇವಿಡ್ ಮಲಾನ್ ಅಬ್ಬರದ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಎರಡನೇ ವಿಕೆಟ್ ಗೆ ಈ ಜೋಡಿ 170 ಎಸೆತಗಳಲ್ಲಿ 222 ರನ್ ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು.

ಫಿಲ್ ಸಾಲ್ಟ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 93 ಎಸೆತಗಳಲ್ಲಿ 122 ರನ್ ಸಿಡಿಸಿದರು. ಇವರ ಸೊಗಸಾದ ಇನ್ನಿಂಗ್ಸ್ ನಲ್ಲಿ 14 ಬೌಂಡರಿ, 3 ಸಿಕ್ಸರ್ ಸೇರಿವೆ.
ಫಿಲ್ ಸಾಲ್ಟ್ ಔಟ್ ಆಗುತ್ತಿದ್ದಂತೆ ರನ್ ವೇಗವನ್ನು ಸ್ಥಿರವಾಗಿ ಮುಂದುವರಿಸಿದ ಡೇವಿಡ್ ಮಲಾನ್ ಹಾಗೂ ಜೋಸ್ ಬಟ್ಲರ್ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಜೋಡಿಯನ್ನು ಕಟ್ಟಿಹಾಕಲು ಎದುರಾಳಿ ನೆದರ್ಲೆಂಡ್ಸ್ ವಿಫಲವಾಯಿತು.

ಡೇವಿಡ್ ಮಲಾನ್ 109 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 128 ರನ್ ಸಿಡಿಸಿದರು.
ಇನ್ನು ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದ ಜೋಸ್ ಬಟ್ಲರ್ ಇದೇ ಫಾರ್ಮ್ ನ್ನು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಮುಂದುವರಿಸಿದರು. ಆರ್ಭಟದ ಬ್ಯಾಟಿಂಗ್ ನಡೆಸಿದ ಬಟ್ಲರ್ ಸುಂಟರಗಾಳಿಯ ರೀತಿ ಬ್ಯಾಟಿಂಗ್ ನಡೆಸಿದರು. ಇವರು 70 ಎಸೆತಗಳಲ್ಲಿ 162 ರನ್ ಸಿಡಿಸಿದರು. ಇವರ ಅಬ್ಬರದ ಇನ್ನಿಂಗ್ಸ್ ನಲ್ಲಿ 14 ಮುಗಿಲೆತ್ತರದ ಸಿಕ್ಸರ್ ಸೇರಿವೆ. ಅಲ್ಲದೆ 7 ಬೌಂಡರಿ ಬಾರಿಸಿದ್ದಾರೆ.

ಲಿಯಾಮ್ ಲಿವಿಂಗ್ ಸ್ಟೋನ್ ಭರ್ಜರಿ ಸ್ಟ್ರೈಕ್ ರೇಟ್ ಮೂಲಕ ಬ್ಯಾಟಿಂಗ್ ನಡೆಸಿದರು. ಇವರು 22 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 66 ರನ್ ಸಿಡಿಸಿದರು.
ಅಂತಿಮವಾಗಿ ಇಂಗ್ಲೆಂಡ್ 50 ಓವರ್ ಗಳಲ್ಲಿ 4 ವಿಕೆಟ್ ಗೆ 498 ರನ್ ಕಲೆ ಹಾಕಿದೆ. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಸೇರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ. ಇದಕ್ಕೂ ಮೊದಲು ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ಗೆ 481 ರನ್ ಸೇರಿಸಿತ್ತು.