T20 WCC ಟೂರ್ನಿಯ ಸೂಪರ್ 12ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ 4 ರನ್ ರೋಚಕ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ, ಮಿಚೆಲ್ ಮಾರ್ಷ್ (45) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (54*) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 168/8 ರನ್ ಕಲೆಹಾಕಿತ್ತು. 169 ರನ್ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಕೊನೆಯ 6 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು. ಆದರೆ, ಅಫ್ಘಾನಿಸ್ತಾನ 16 ರನ್ ಮಾತ್ರ ಗಳಿಸಿತು. ರಶೀದ್ ಖಾನ್ 23 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ, ಆಸೀಸ್ ತಂಡದ ಬೆವರಿಳಿಸಿದರು.
ಈ ಜಯದೊಂದಿಗೆ ಸೂಪರ್-12 ಹಂತದಲ್ಲಿನ ‘ಎ’ ಗುಂಪಿನಲ್ಲಿ AUS 2ನೇ ಸ್ಥಾನಕ್ಕೆ ಜಿಗಿತಕಂಡಿದೆ. ಆಸ್ಟ್ರೇಲಿಯಾ ತನ್ನ 5 ಪಂದ್ಯಗಳನ್ನು ಆಡಿ 7 ಅಂಕಗಳನ್ನು ಕಲೆಹಾಕಿದೆ. ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ಮುನ್ನಡೆದ ಮೊದಲ ತಂಡವಾಗಿದೆ. ಇಂಗ್ಲೆಂಡ್ 4 ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿದ್ದು, ಮೂರನೇ ಸ್ಥಾನದಲ್ಲಿದೆ. ಶನಿವಾರ ಶ್ರೀಲಂಕಾ ತಂಡದ ಸವಾಲು ಎದುರಿಸಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ, ಇಂಗ್ಲೆಂಡ್ ವಿರುದ್ಧ ಗೆಲ್ಲಲಿ ಅನ್ನೋದು ಆಸೀಸ್ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಲಿಷ್ಠ ಇಂಗ್ಲೆಂಡ್‌ಗೆ ಸೋಲಿನ ಶಾಕ್ ನೀಡಿದರೆ ಮಾತ್ರ, ಆಸ್ಟ್ರೇಲಿಯಾ ಸೆಮಿಫೈನಲ್ಸ್‌ಗೆ ಎಂಟ್ರಿಕೊಡಲಿದೆ. ಒಂದು ವೇಳೆ ಈ ಪಂದ್ಯ ರದ್ದಾಗಿ ಅಂಕ ಸಿಕ್ಕರೇ, ಸೆಮಿಫೈನಲ್ಸ್ ಟಿಕೆಟ್ ಆಸೀಸ್‌ಗೆ ಸಿಗಲಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ದೊಡ್ಡ ಅಂತರದ ಜಯ ದಾಖಲಿಸಬೇಕಿತ್ತು. ಸದ್ಯ ಆಸೀಸ್ ತಂಡದ ನೆಟ್‌ರನ್‌ರೇಟ್ -0.173 ಆಗಿದೆ. ಅದೇ ಇಂಗ್ಲೆಂಡ್ +0.547 ನೆಟ್‌ರನ್‌ರೇಟ್ ಹೊಂದಿದೆ. ಹೀಗಾಗಿ, ಆಸೀಸ್ ಪಾಲಿಗೆ ಲಂಕಾ ಗೆಲ್ಲಬೇಕಿದೆ.
ಇದನ್ನೂ ಓದಿ – https://sportskarnataka.com/t20-cwc-2022-moh…anistans-captain/