ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ವೈಫಲ್ಯದಿಂದ ಕಂಗೆಟ್ಟಿರುವ ಇಂಗ್ಲೆಂಡ್ ತಂಡದ ಸೋಲಿನ ಸಂಕಷ್ಟು ಮುಂದುವರಿದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ ಜೋ ರೂಟ್ ಪಡೆ, ಮತ್ತೊಂದು ಸರಣಿ ಸೋಲಿನ ಆಘಾತ ಕಂಡಿದೆ.
ಗ್ರೆನಡಾದ ಸೆಂಟ್ ಜಾರ್ಜ್ ಅಂಗಳದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಂಡೀಸ್ ಪಡೆ 1-0 ಮುನ್ನಡೆಯೊಂದಿಗೆ ಸರಣಿ ತನ್ನದಾಗಿಸಿಕೊಂಡಿತು.
ಉಭಯ ತಂಡಗಳ ನಡುವಿನ ಆರಂಭಿಕ ಎರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಎರಡು ತಂಡಗಳು ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 204 ರನ್‌ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ 297 ರನ್‌ಗಳಿಸಿ, ಮೊದಲ ಇನ್ನಿಂಗ್ಸ್‌ನಲ್ಲಿ 93 ರನ್‌ಗಳ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್, 3ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 103 ರನ್‌ಗಳಿಸಿತ್ತು. ಆದರೆ 4ನೇ ದಿನದಾಟದ ಮುಂದುವರಿಸಿದ ಇಂಗ್ಲೆಂಡ್, 120 ರನ್‌ಗಳಿಗೆ ಆಲೌಟ್ ಆಗಿ ವೆಸ್ಟ್ ಇಂಡೀಸ್‌ಗೆ 27 ಸುಲಭದ ಗುರಿ ನೀಡಿತು.
ಇಂಗ್ಲೆಂಡ್ ತಂಡದ ಸುಲಭದ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್, 4.5 ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್‌ಗಳಿಸಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಇನ್ನೂ ಒಂದು ದಿನದಾಟ ಬಾಕಿಯಿರುವಂತೆಯೇ ವೆಸ್ಟ್ ಇಂಡೀಸ್, ಬಾಥಂ-ರಿಚರ್ಡ್ಸ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತು. 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಮಿಂಚಿದ ಜೊಶುವಾ ಡಸಿಲ್ವಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೇಗ್ ಬ್ರಾಥ್ವೇಟ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.