ಆಲ್ರೌಂಡರ್ ಜೇಸನ್ ಹೋಲ್ಡರ್(43*) ಹಾಗೂ ಎನ್ಕ್ರುಮಾ ಬೋನರ್(34*) ಜವಾಬ್ದಾರಿಯುತ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ 2ನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯ ಸಾಧಿಸಿದೆ.
ಆಂಟಿಗುವಾದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಾಂಘಿಕ ಪ್ರದರ್ಶನದ ನೀಡಿತು. ಪ್ರವಾಸಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್ ಆದರೆ, ಅತಿಥೇಯ ವೆಸ್ಟ್ ಇಂಡೀಸ್ 2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್‌ಗಳಿಸಿದ್ದು, 109 ರನ್‌ಗಳ ಹಿನ್ನಡೆಯೊಂದಿಗೆ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತ 311 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕ್ರೇಗ್ ಬ್ರಾಥ್ವೇಟ್(55) ಅರ್ಧಶತಕ ಸಿಡಿಸಿ ಮಿಂಚಿದರೆ, ಜಾನ್ ಕ್ಯಾಂಪ್ಬೆಲ್(35) ಉತ್ತಮ ಆಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 85 ರನ್‌ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ನಂತರ ಬಂದ ಶಮರ್ ಬ್ರೂಕ್ಸ್(18) ಹಾಗೂ ಜೆರ್ಮೈನ್ ಬ್ಲ್ಯಾಕ್‌ವುಡ್(11) ಬಹುಬೇಗನೆ ನಿರ್ಗಮಿಸಿದರು. ಪರಿಣಾಮ ವಿಂಡೀಸ್ ಚಹಾ ವಿರಾಮದ ವೇಳೆಗೆ 127ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಹೋಲ್ಡರ್-ಬೋನರ್ ಆಸರೆ
ಈ ಹಂತದಲ್ಲಿ ಕಣಕ್ಕಿಳಿದ ಜೇಸನ್ ಹೋಲ್ಡರ್(43*) ಹಾಗೂ ಎನ್ಕ್ರುಮಾ ಬೋನರ್(34*) ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. 5ನೇ ವಿಕೆಟ್‌ಗೆ ಇವರಿಬ್ಬರು ಅಜೇಯ 75 ರನ್‌ಗಳ ಜೊತೆಯಾಟವಾಡಿದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದ ವೆಸ್ಟ್ ಇಂಡೀಸ್, ದಿನದಂತ್ಯಕ್ಕೆ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು.
ಇಂಗ್ಲೆಂಡ್ 311ಕ್ಕೆ ಸರ್ವಪತನ
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ಮೊತ್ತ 6 ವಿಕೆಟ್‌ಗೆ 268 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ನಿರೀಕ್ಷಿತ ಮೊತ್ತ ಕಲೆ ಹಾಕಲಿಲ್ಲ. ಮೊದಲ ದಿನದಂತ್ಯಕ್ಕೆ 109 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದ ಜಾನಿ ಬೈರ್ಸ್ಟೋವ್, 31 ರನ್‌ಗಳಿಸುವ ಮೂಲಕ ತಂಡದ ಮೊತ್ತ 300ರ ಗಡಿದಾಟುವಂತೆ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಬೈಸ್ಟೋವ್ 140 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಕೆಳ ಕ್ರಮಾಂಕದಲ್ಲಿ ಬಂದ ಕ್ರಿಸ್ ವೋಕ್ಸ್(28), ಕ್ರೇಗ್ ಓವರ್ಟನ್(0), ಮಾರ್ಕ್ ವುಡ್(1), ಜ್ಯಾಕ್ ಲೀಚ್(4) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ವಿಂಡೀಸ್ ಪರ ಜೇಡನ್ ಸೀಲ್ಸ್ 4 ವಿಕೆಟ್ ಪಡೆದರೆ, ಕೇಮರ್ ರೋಚ್, ಜೇಸನ್ ಹೋಲ್ಡರ್ ಹಾಗೂ ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್ ಪಡೆದುಕೊಂಡರು.