ಪ್ರವಾಸಿ ನ್ಯೂಜಿ಼ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಯುವ ವೇಗದ ಬೌಲರ್ ಜೇಮೀ ಓವರ್ಟನ್ ಇಂಗ್ಲೆಂಡ್ ತಂಡವನ್ನ ಸೇರಿಕೊಂಡಿದ್ದಾರೆ. ಉಭಯ ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯ ಜೂ.23ರಿಂದ ಹೆಡಿಂಗ್ಲೆಯಲ್ಲಿ ನಡೆಯಲಿದೆ.
ಇಂಗ್ಲೆಂಡ್ ತಂಡದಲ್ಲಿ ಈಗಾಗಲೇ ಮಿಂಚುತ್ತಿರುವ ಕ್ರೇಗ್ ಓವರ್ಟನ್ ಅವರ ಸಹೋದರ ಜೇಮೀ ಓವರ್ಟನ್, ಕೌಂಟಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಜೇಮೀ ಓವರ್ಟನ್ ಕೌಂಟಿ ಚಾಂಪಿಯನ್ಶಿಪ್ನ ಡಿವಿಷನ್ 1ರಲ್ಲಿ ಸರ್ರೆ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದ್ಭುತ ಬೌಲಿಂಗ್ನಿಂದ ಗಮನ ಸೆಳೆದಿರುವ 28 ವರ್ಷದ ಯುವ ವೇಗದ ಬೌಲರ್ 21.61ರ ಸರಾಸರಿಯಲ್ಲಿ 21 ವಿಕೆಟ್ಗಳನ್ನು ಪಡೆದಿದ್ದಾರೆ.
ಅತ್ಯುತ್ತಮ ವೇಗದ ಬೌಲಿಂಗ್ನಿಂದ ಕಮಾಲ್ ಮಾಡಿರುವ ಜೇಮೀ ಓವರ್ಟನ್, ಸೋಮರ್ಸೆಟ್ ವಿರುದ್ಧ 5/90 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಇದೀಗ ಹೆಡಿಂಗ್ಲೆಯ ಲೀಡ್ಸ್ ಅಂಗಳದಲ್ಲಿ ನಡೆಯುವ 3ನೇ ಟೆಸ್ಟ್ಗಾಗಿ ಇಂಗ್ಲೆಂಡ್ ತಂಡವನ್ನು ಸೇರಿರುವುದು ತಂಡದ ಬಲ ಹೆಚ್ಚಿಸಿದೆ. ಜೇಮೀ ಓವರ್ಟನ್ ಸೇರ್ಪಡೆ ಬೆನ್ನಲ್ಲೇ ಮ್ಯಾಟ್ ಪಾರ್ಕಿನ್ಸನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಅತಿಥೇಯ ಇಂಗ್ಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಾಗಿ ಹೆಡಿಂಗ್ಲಿಯಲ್ಲಿ ಸರಣಿ ವೈಟ್ವಾಶ್ ಮೇಲೆ ಕಣ್ಣಿಟ್ಟಿರುವ ಬೆನ್ ಸ್ಟೋಕ್ಸ್ ಪಡೆ, ಮೂರನೇ ಟೆಸ್ಟ್ಗೆ ತಯಾರಿ ಆರಂಭಿಸಿದೆ.
3ನೇ ಟೆಸ್ಟ್ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಫೋಕ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಮ್ಯಾಥ್ಯೂ ಪಾಟ್ಸ್, ಆಲಿ ಪೋಪ್, ಜೋ ರೂಟ್.