ಆರಂಭಿಕ ಆಘಾತದ ನಡುವೆಯೂ ಓಲ್ಲಿ ಪೋಪ್(81*) ಹಾಗೂ ಜೋ ರೂಟ್(55*) ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಬಲಿಷ್ಠ ಕಮ್ ಬ್ಯಾಕ್ ಮಾಡಿದ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿ಼ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು, ಸರಣಿಯನ್ನ ಕ್ಲೀನ್ ಸ್ವೀಪ್ ಮಾಡುವತ್ತ ಹೆಜ್ಜೆಯಿಟ್ಟಿದೆ.
ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಸಂಘಟಿತ ಪ್ರದರ್ಶನದ ಮೂಲಕ ನ್ಯೂಜಿ಼ಲೆಂಡ್ ತಂಡವನ್ನ 2ನೇ ಇನ್ನಿಂಗ್ಸ್ ನಲ್ಲಿ 326 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಗೆಲುವಿಗೆ 296 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್, ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದ್ದು, ಎಂಟು ವಿಕೆಟ್ ಹೊಂದಿರುವ ಆಂಗ್ಲರ ಗೆಲುವಿಗೆ 113 ರನ್ಗಳ ಅಗತ್ಯವಿದೆ. 132* ರನ್ಗಳ ಅದ್ಭುತ ಜೊತೆಯಾಟವಾಡಿರುವ ಪೋಪ್ ಹಾಗೂ ರೂಟ್, ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕಿವೀಸ್ 326ಕ್ಕೆ ಆಲೌಟ್
ನಾಲ್ಕನೇ ದಿನದಾಟವನ್ನ 168/5 ಆರಂಭಿಸಿದ ನ್ಯೂಜಿ಼ಲೆಂಡ್ ತಂಡಕ್ಕೆ ಡೆರಿಲ್ ಮಿಚೆಲ್(56) ಹಾಗೂ ಟಾಮ್ ಬ್ಲಂಡಲ್(88*) ಮತ್ತೊಮ್ಮೆ ಆಸರೆಯಾದರು. ಜವಾಬ್ದಾರಿಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನ 300ರ ಗಡಿದಾಟಿಸಿದರು. ಆದರೆ ಮಿಚೆಲ್ ವಿಕೆಟ್ ಪತನದ ಬಳಿಕ ಬಂದ ಯಾವ ಆಟಗಾರರು ಹೆಚ್ಚು ಹೊತ್ತು ಕಣದಲ್ಲಿ ಉಳಿಯದ ಪರಿಣಾಮ ಕಿವೀಸ್ 326ಕ್ಕೆ ಆಲೌಟ್ ಅಯಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 5/66 ಹಾಗೂ ಮ್ಯಾಥ್ಯೂ ಪಾಟ್ಸ್ 3/66 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಪೋಪ್-ರೂಟ್ ಆರ್ಭಟ
ಗೆಲುವಿಗೆ 296 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ 51 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಅಲೆಕ್ಸ್ ಲೀಸ್(9) ಹಾಗೂ ಜ್ಯಾಕ್ ಕಾರ್ವ್ಲೆ(25) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 3ನೇ ವಿಕೆಟ್ಗೆ ಜೊತೆಯಾದ ಓಲ್ಲಿ ಪೋಪ್(81*) ಹಾಗೂ ಮಾಜಿ ನಾಯಕ ಜೋ ರೂಟ್(55*) ಜವಾಬ್ದಾರಿಯ ಆಟದ ಮೂಲಕ ಕಿವೀಸ್ ಲೆಕ್ಕಾಚಾರವನ್ನೆಲ್ಲಾ ಹುಸಿಗೊಳಿಸಿದರು. 3ನೇ ವಿಕೆಟ್ಗೆ ಅಜೇಯ 132 ರನ್ ಕಲೆಹಾಕಿರುವ ಈ ಜೋಡಿ, ಇಂಗ್ಲೆಂಡ್ ತಂಡವನ್ನ ಗೆಲುವಿನ ಹಾದಿಯಲ್ಲಿ ತಂದು ನಿಲ್ಲಿಸಿದ್ದಾರೆ. ಮತ್ತೊಂದೆಡೆ ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿ಼ಲೆಂಡ್ ಕ್ಲೀನ್ ಸ್ವೀಪ್ ಆತಂಕದಿಂದ ಪಾರಾಗುವ ನಿರೀಕ್ಷೆಯಲ್ಲಿದೆ. ಹೀಗಾಗಿ ಪಂದ್ಯದ ಅಂತಿಮ ಹಾಗೂ 5ನೇ ದಿನದಾಟ ಸಾಕಷ್ಟು ಕುತೂಹಲ ಮೂಡಿಸಿದೆ.