ಭಾರತದ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಸೋಲಿನ ನಡುವೆಯೂ ಶತಕ ಸಿಡಿಸಿ ಮಿಂಚಿದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 238 ರನ್‌ಗಳಿಂದ ಸೋಲನುಭವಿಸಿತು. ಆದರೆ ತಂಡದ ಸೋಲಿನ ನಡುವೆಯೂ ಲಂಕಾ ತಂಡದ ನಾಯಕ ದಿಮುತ್ ಕರುಣಾರತ್ನೆ, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕರುಣಾರತ್ನೆ, ತಮ್ಮ ಟೆಸ್ಟ್ ವೃತ್ತಿ ಜೀವನದ 14ನೇ ಶತಕ ಬಾರಿಸಿ ಮಿಂಚಿದರು.
ಭಾರತದ ವಿರುದ್ಧದ ಟೆಸ್ಟ್ ಸರಣಿ ಹಾಗೂ ಬೆಂಗಳೂರಿನ ಪ್ರೇಕ್ಷಕರು ತಾವು ಶತಕ ಗಳಿಸಿದ ಸಂದರ್ಭದಲ್ಲಿ ನೀಡಿದ ಗೌರವದ ಕುರಿತು ಟ್ವೀಟ್ ಮಾಡಿರುವ ಕರುಣಾರತ್ನೆ, “ಕಠಿಣ ಸರಣಿ ! ಇದು ಈ ರೀತಿ ಸಾಗುತ್ತದೆ ಎಂದು ನಿರೀಕ್ಷೆ ಹೊಂದಿರಲಿಲ್ಲ! ಭಾರತ ಗೆಲುವಿಗೆ ಅರ್ಹವಾಗಿದೆ. ಇಂದಿನ ಹಣಾಹಣಿ ಭಿನ್ನವಾಗಿರಲಿಲ್ಲ. ನನ್ನ 14ನೇ ಟೆಸ್ಟ್ ಶತಕ ಬಾರಿಸಿದ್ದನ್ನು ಬೆಂಗಳೂರಿನ ಪ್ರೇಕ್ಷಕರು ಸ್ವಾಗತಿಸಿದ ರೀತಿ ಆಶ್ವಯ ಮೂಡಿಸಿತು! ಧನ್ಯವಾದಗಳು” ಎಂದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಕರುಣಾರತ್ನೆ ಕೃತಜ್ಞತೆ ತಿಳಿಸಿದ್ದಾರೆ.
ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡುವ ನಿಟ್ಟಿನಲ್ಲಿ ಏಕಾಂಗಿ ಹೋರಾಟ ನಡೆಸಿದ ದಿಮುತ್ ಕರುಣಾರತ್ನೆ ಆಟಕ್ಕೆ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಭಾರತದ ಆಟಗಾರರು ಸಹ ಶ್ರೀಲಂಕಾ ನಾಯಕ ಆಟವನ್ನ ಪ್ರಶಂಸಿಸಿದರು. ಅಂತಿಮವಾಗಿ ಕರುಣಾರತ್ನೆ 107 ರನ್‌ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು