ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್(88*) ಹಾಗೂ ಬನುಕಾ ರಾಜಪಕ್ಸ(42) ಅವರುಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 187 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್ಗಳ ಮೊತ್ತಮ ಮೊತ್ತಗಳಿಸಿತು. ಪಂಜಾಬ್ ಪರ ಶಿಖರ್ ಧವನ್(88*) ಹಾಗೂ ರಾಜಪಕ್ಸ(42) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಧವನ್-ರಾಜಪಕ್ಸ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಮಯಂಕ್ ಅಗರ್ವಾಲ್(18) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ಜೊತೆಯಾದ ಶಿಖರ್ ಧವನ್ 88* ರನ್(59 ಬಾಲ್, 9 ಬೌಂಡರಿ, 2 ಸಿಕ್ಸ್) ಐಪಿಎಲ್ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಬನುಕಾ ರಾಜಪಕ್ಸ 42 ರನ್(32 ಬಾಲ್, 2 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಸಿಎಸ್ಕೆ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 2ನೇ ವಿಕೆಟ್ಗೆ 110(71) ರನ್ಗಳ ಜೊತೆಯಾಟದ ಮೂಲಕ ತಂಡದ ಬೆನ್ನೆಲುಬಾಗಿ ಮಿಂಚಿದರು.
ರಾಜಪಕ್ಸ ವಿಕೆಟ್ ಪತನದ ನಂತರ ಬಂದ ಲಿಯಮ್ ಲಿವಿಂಗ್ಸ್ಟೋನ್ 19 ರನ್ (7 ಬಾಲ್, 1 ಬೌಂಡರಿ, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ ಧವನ್ ಹಾಗೂ ಲಿವಿಂಗ್ಸ್ಟೋನ್ 3ನೇ ವಿಕೆಟ್ಗೆ 27(11) ಜೊತೆಯಾಟದ ಕಾಣಿಕೆ ನೀಡಿದರು. ಕೊನೆಯಲ್ಲಿ ಬಂದ ಜಾನಿ ಬೈರ್ಸ್ಟೋವ್(6) ರನ್ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ(2/42) ಹಾಗೂ ಮಹೀಶ್ ತೀಕ್ಷಣ(1/32) ವಿಕೆಟ್ ಪಡೆದರು.