Shreyas Iyer – ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರಲು ಕಾರಣ ಗಾಯ – ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್.. ಸದ್ಯ ಹೆಚ್ಚು ಸುದ್ದಿಯಲ್ಲಿರುವ ಆಟಗಾರ. ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳಲ್ಲೂ ಅಜೇಯ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನೊಂದೆಡೆ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಮೆಗಾ ಬಿಡ್ಡಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ತಂಡ 12. 25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಆದ್ರೂ ಶ್ರೇಯಸ್ ಅಯ್ಯರ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. 2020ರಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದರು. ಅಲ್ಲದೆ ಫೈನಲ್ ನಲ್ಲಿ ಸೋಲು ಅನುಭವಿಸಿದ್ದರು.
ಆದ್ರೆ 2021ರಲ್ಲಿ ಶ್ರೇಯಸ್ ಅಯ್ಯರ್ ಅವರು ಆಘಾತದ ಮೇಲೆ ಆಘಾತ ಅನುಭವಿಸಿದ್ದರು. ಒಂದು ಕಡೆ ಭುಜ ನೋವು ಮತ್ತೊಂದೆಡೆ ಡೆಲ್ಲಿ ತಂಡದ ನಾಯಕತ್ವದಿಂದ ಹೊರಗುಳಿಯಬೇಕಾಯ್ತು.
ಐಪಿಎಲ್ ವೇಳೆ ಶ್ರೇಯಸ್ ಅಯ್ಯರ್ ಭುಜ ನೋವಿನಿಂದಾಗಿ ಆರಂಭದಲ್ಲಿ ಅಲಭ್ಯರಾಗಿದ್ದರು. ಹೀಗಾಗಿ ರಿಷಬ್ ಪಂತ್ ಅವರಿಗೆ ಡೆಲ್ಲಿ ತಂಡದ ನಾಯಕತ್ವ ಒಲಿದು ಬಂತು. ಅಯ್ಯರ್ ಮತ್ತೆ ತಂಡವನ್ನು ಸೇರಿಕೊಂಡ ನಂತರವೂ ರಿಷಬ್ ಪಂತ್ ಅವರು ನಾಯಕರಾಗಿ ಮುಂದುವರಿದ್ರು. ಆದ್ರೆ ಫ್ಲೇ ಆಫ್ ನಲ್ಲಿ ನಿರಾಸೆ ಅನುಭವಿಸಿದ್ರು. Delhi Capitals wouldn’t have stepped me down as captain had I not gotten injured: Shreyas Iyer

2022ರ ಐಪಿಎಲ್ ನಲ್ಲಿ ರಿಷಬ್ ಪಂತ್ ಅವರನ್ನೇ ನಾಯಕನಾಗಿ ಮುಂದುವರಿಸುವ ನಿರ್ಧಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತೆಗೆದುಕೊಂಡಿತ್ತು. ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಟೇನ್ ಮಾಡಿಕೊಂಡಿರಲಿಲ್ಲ. ಆದ್ರೆ ಈ ಬಗ್ಗೆ ಶ್ರೇಯಸ್ ಅಯ್ಯರ್ ಅವರಿಗೆ ಬೇಸರವಿಲ್ಲ.
ಒಂದು ವೇಳೆ ನಾನು ಗಾಯಗೊಳ್ಳದಿದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿರಲಿಲ್ಲ. ಗಾಯದಿಂದಾಗಿ ನಾನು ನಾಯಕತ್ವವನ್ನು ಕಳೆದುಕೊಳ್ಳಬೇಕಾಯ್ತು. 2019ರಿಂದ ನಾನು ಡೆಲ್ಲಿ ತಂಡದ ಪರ ಆಡುತ್ತಿದ್ದೇನೆ. ತಂಡದೊಳಗಿನ ವಾತಾವರಣ ಅದ್ಭುತವಾಗಿತ್ತು. ಆಟಗಾರರಿಗೆ ತಮ್ಮ ಸ್ಟ್ರೆಂತ್ ಮತ್ತು ವೀಕ್ ನೆಸ್ ಏನು ಎಂಬುದು ಗೊತ್ತಿತ್ತು. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವ ಹಾಗೇ ಗಾಯದ ಸಮಸ್ಯೆ ನನ್ನನ್ನು ಕಾಡಿತ್ತು. ಕೆಲವೊಂದು ಬಾರಿ ಈ ರೀತಿ ಆಗುತ್ತದೆ. ಗಾಯಕ್ಕಿಂತ ಮುನ್ನ ನಾನು ಅದ್ಭುತವಾದ ಫಾರ್ಮ್ ನಲ್ಲಿದ್ದೆ. ಇದೀಗ ಗಾಯದಿಂದ ಪೂರ್ತಿ ಚೇತರಿಸಿಕೊಂಡಿದ್ದೇನೆ. ಉತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸವೂ ಮೂಡಿದೆ ಎಂದು ಅಯ್ಯರ್ ಹೇಳಿದ್ದಾರೆ.
ಈ ಹಿಂದೆ ಡೆಲ್ಲಿ ತಂಡಕ್ಕೆ ಹೊಸ ಸ್ವರೂಪ ಕೊಟ್ಟಿದ್ದ ಶ್ರೇಯಸ್ ಅಯ್ಯರ್ ಅವರು ಈಗ ಕೆಕೆಆರ್ ತಂಡದ ಸಾರಥಿಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಕೆಕೆಆರ್ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದನ್ನು ಕಾದು ನೋಡೋಣ.