ಐಪಿಎಲ್ 2022ರಲ್ಲಿ ಇಲ್ಲಿ ತನಕ ನಡೆದ 33 ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿ ಗೆದ್ದ ಪಂದ್ಯಗಳ ಸಂಖ್ಯೆ 19. ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳ ಸಂಖ್ಯೆ 14. ಅಚ್ಚರಿ ಅಂದರೆ ರಾಜಸ್ಥಾನ ರಾಯಲ್ಸ್ ಗೆದ್ದಿರುವ 4 ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್ ನಡೆಸಿತ್ತು. ಟ್ರೆಂಡ್ ಬದಲಿಸಿದ ಖ್ಯಾತಿ ರಾಯಲ್ಸ್ ತಂಡದ್ದು. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಾಯಲ್ಸ್, 7ನೇ ಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸುತ್ತಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ನಡುವಿನ ಪಂದ್ಯ ಪವರ್ ಪ್ಲೇ ಕದನ. ಪೃಥ್ವಿ ಷಾ ಮತ್ತು ಡೇವಿಡ್ ವಾರ್ನರ್ ಡೆಲ್ಲಿಗೆ ಪವರ್ ಪ್ಲೇ ಲಾಭ ತಂದುಕೊಟ್ಟರೆ, ಜೋಸ್ ಬಟ್ಲರ್ ಒಬ್ಬರೇ ಪವರ್ ಪ್ಲೇ ನಲ್ಲಿ ಎಲ್ಲಾ ಲೆಕ್ಕಾಚಾರ ಬದಲಿಸಿದ್ದಾರೆ. ಹೀಗಾಗಿ ಪವರ್ ಪ್ಲೇ ನಲ್ಲೇ ಈ ಪಂದ್ಯದ ರೋಚಕತೆ ನಿರ್ಧಾರವಾಗಲಿದೆ.
ರಾಜಸ್ಥಾನಕ್ಕೆ ಬ್ಯಾಟಿಂಗ್ ಭಯವಿಲ್ಲ. ಆರೇಂಜ್ ಕ್ಯಾಪ್ ವಿನ್ನರ್ ಜೋಸ್ ಬಟ್ಲರ್ ಪವರ್ ಪ್ಲೇ ಮತ್ತು ಮಧ್ಯಮ ಓವರ್ನಲ್ಲಿ ಪವರ್ ಹಿಟ್ ತೋರಿಸಿದ್ದಾರೆ. ಶಿಮ್ರನ್ ಹೆಟ್ಮಾಯರ್ ಫೈನಲ್ ಟಚ್ ಮೂಲಕ ಫಿನಿಶಿಂಗ್ ತಂದಿದ್ದಾರೆ. ಆದರೆ ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ ನಿಜವಾದ ಸಾಮರ್ಥ್ಯ ತೋರಿಸಿಲ್ಲ. ಕರುಣ್ ನಾಯರ್ ಗೆ ಅವಕಾಶ ಸಿಕ್ಕಿಲ್ಲ. ರಿಯಾನ್ ಪರಾಗ್ ಕೊನೆಯಲ್ಲಿ ಸ್ಥಿರತೆ ತೋರಿಸಿಲ್ಲ.
ಬೌಲಿಂಗ್ನಲ್ಲಿ ರಾಯಲ್ಸ್ ಸೂಪರ್. ಟ್ರೆಂಟ್ ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ಆರಂಭದಲ್ಲೇ ವಿಕೆಟ್ ಪಡೆದು ಒತ್ತಡ ಹಾಕುತ್ತಿದ್ದಾರೆ. ಅಶ್ವಿನ್ ಮತ್ತು ಚಹಲ್ ಜೋಡಿ ರನ್ ಕೊಡುವುದಿಲ್ಲ, ಬ್ಯಾಟ್ಸ್ ಮನ್ ಗಳನ್ನು ಗಟ್ಟಿಯಾಗಿ ನಿಲ್ಲಲು ಬಿಡುವುದೂ ಇಲ್ಲ. ಆದರೆ 5ನೇ ಬೌಲರ್ ಸಮಸ್ಯೆ ರಾಯಲ್ಸ್ಗೆ ಕಾಡುತ್ತಿದೆ. ಒಬೆಡ್ ಮೆಕಾಯ್ ಒಂದೇ ಪಂದ್ಯ ಆಡಿದ್ದರೂ ಇಂಪ್ರೆಸ್ ಮಾಡಿರುವುದು ಸತ್ಯ.
ಡೆಲ್ಲಿ ತಂಡದಲ್ಲಿ ಆಟದ ಸಮಸ್ಯೆ ಇಲ್ಲ. ಆದರೆ ಕೋವಿಡ್ ಸಮಸ್ಯೆ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಗೆದ್ದಿದೆ ಅನ್ನುವ ವಿಶ್ವಾಸವಿದೆ. ಡೇವಿಡ್ ವಾರ್ನರ್ ಮತ್ತು ಪೃಥ್ವಿ ಷಾ ಆಟ ನಿರ್ಣಾಯಕ. ನಾಯಕ ರಿಷಬ್ ಪಂತ್ ಮತ್ತು ಸರ್ಫರಾಜ್ ಖಾನ್ ಹೆಚ್ಚು ಕೊಡುಗೆ ನೀಡಬೇಕಿದೆ. ರೋವ್ಮನ್ ಪೊವೆಲ್ ಸಾಮರ್ಥ್ಯಕ್ಕೆ ತಕ್ಕ ಆಟ ಆಡಬೇಕಿದೆ. ಲಲಿತ್ ಯಾದವ್, ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಬೌಲಿಂಗ್ ಆಲ್ರೌಂಡರ್ಗಳಾದರೂ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲರು.
ಡೆಲ್ಲಿ ಬೌಲಿಂಗ್ ಶಕ್ತಿ ಚೆನ್ನಾಗಿದೆ. ಮುಸ್ತಾಫಿಝುರ್ ರೆಹಮಾನ್ ವೆರೈಟಿ ಮೂಲಕ ಮಿಂಚುತ್ತಿದ್ದಾರೆ. ಶಾರ್ದೂಲ್ ಮತ್ತು ಖಲೀಲ್ ಅಹ್ಮದ್ ತಮ್ಮ ಕೆಲಸ ಮಾಡುತ್ತಿದ್ದಾರೆ. ಅಕ್ಸರ್ ಮತ್ತು ಕುಲ್ ದೀಪ್ ಸ್ಪಿನ್ ಬಲೆ ಹೆಣೆದಿದ್ದಾರೆ. ಲಲಿತ್ಯಾದವ್ ಕೂಡ 6ನೇ ಬೌಲರ್ ಆಗಿ ಕೆಲಸ ಮಾಡುತ್ತಿದ್ದಾರೆ.
ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಲರ್ ಗಳು ಕೊಂಚ ನೆಮ್ಮದಿಯಾಗಿದ್ದಾರೆ. ಲೋ ಸ್ಕೋರ್ ಅಲ್ಲದೇ ಇದ್ದರೂ ಬಿಗ್ ಸ್ಕೋರ್ ಮಾಡುವುದು ಈ ಮೈದಾನದಲ್ಲಿ ಕೊಂಚ ಕಷ್ಟ.