ರಣಜಿ ಟ್ರೋಫಿಯಲ್ಲಿ ಬರೋಡಾ ಪರ ಆಡುತ್ತಿರುವ ವಿಷ್ಣು ಸೋಳಂಕಿ ಚಂಡೀಗಢ ವಿರುದ್ಧ ಶತಕ ಬಾರಿಸಿದ್ದಾರೆ. ಬ್ಯಾಟರ್ ಪಂದ್ಯದ ವೇಳೆ ಶತಕ ಬಾರಿಸಿದರೆ ಅದರಲ್ಲೇನು ವಿಶೇಷತೆ ಅಂದುಕೊಳ್ಳಬೇಡಿ. ನಿಜಕ್ಕೂ ಈ ಸುದ್ದಿ ಓದಿದ ಮೇಲೆ ನೀವು ಸಹ ವಿಷ್ಣು ಆಟಕ್ಕೆ ಸಲಾಂ ಮಾಡುತ್ತೀರಿ.
ವಿಷ್ಣು ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾಳೆ. ಮಗಳ ಸಾವಿನ ಬಳಿಕ ವಿಷ್ಣು ಮಗಳ ಅಂತಿಮ ಸಂಸ್ಕಾರ ನೆರವೇರಿಸಿ ಮೈದಾನಕ್ಕಿಳಿದು ತಂಡದ ಪರ ಶತಕ ಸಿಡಿಸಿದ್ದಾರೆ.
ಚಂಡೀಗಢ ವಿರುದ್ಧ ವಿಷ್ಣು 12 ಬೌಂಡರಿಗಳ ನೆರವಿನಿಂದ 104 ರನ್ ಗಳಿಸಿದರು. ಬರೋಡಾ ಕ್ರಿಕೆಟ್ ಸಂಸ್ಥೆ ಅವರನ್ನು ನಿಜವಾದ ಹೀರೋ ಎಂದು ಬಣ್ಣಿಸಿದೆ. ಅವರ ದಿಟ್ಟ ಇನ್ನಿಂಗ್ಸ್ ನೋಡಿ ಎಲ್ಲರೂ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಅದೇ ಸಮಯದಲ್ಲಿ, ಸೌರಾಷ್ಟ್ರ ಪರ ರಣಜಿ ಟ್ರೋಫಿ ಆಡುತ್ತಿರುವ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಟ್ವೀಟ್ ಮಾಡಿದ್ದಾರೆ. ನಾನು ಇಷ್ಟು ಕಠಿಣ ಆಟಗಾರರನ್ನು ನೋಡಿಲ್ಲ. ವಿಷ್ಣು ಮತ್ತು ಅವರ ಕುಟುಂಬಕ್ಕೆ ನನ್ನ ನಮನಗಳು. ಅವರ ಬ್ಯಾಟ್‌ನಿಂದ ಇಂತಹ ಶತಕಗಳು ಇನ್ನಷ್ಟು ಬರಲಿ ಎಂದು ನಾನು ಬಯಸುತ್ತೇನೆ” ಎಂದು ಬರೆದಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಂದೆ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರ ಮರಣದ ನಂತರ 1999 ರ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ್ದರು. ನಾನು ಮನೆಗೆ ಬಂದಾಗ ನನ್ನ ತಾಯಿಯನ್ನು ನೋಡಿ ಭಾವುಕನಾದೆ ಎಂದು ಸಚಿನ್ ಹೇಳಿದ್ದರು. ನನ್ನ ತಂದೆ ತೀರಿಕೊಂಡ ನಂತರ ಅವಳು ಕುಗ್ಗಿಹೋಗಿದ್ದಳು, ಆದರೆ ದುಃಖದ ಆ ಘಳಿಗೆಯಲ್ಲಿಯೂ ಅವಳು ನಾನು ಮನೆಯಲ್ಲಿ ಇರಲು ಬಯಸಲಿಲ್ಲ ಮತ್ತು ನಾನು ತಂಡಕ್ಕಾಗಿ ಆಡಬೇಕೆಂದು ಬಯಸಿದ್ದಳು. ಕೀನ್ಯಾ ವಿರುದ್ಧ ಆ ಶತಕ ಬಾರಿಸಿದಾಗ ತುಂಬಾ ಭಾವುಕನಾದೆ. ಕೀನ್ಯಾ ವಿರುದ್ಧ ಸಚಿನ್ 101 ಎಸೆತಗಳಲ್ಲಿ 140 ರನ್ ಗಳಿಸಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಯೂ ರಣಜಿ ಪಂದ್ಯದ ವೇಳೆ ಇದೇ ರೀತಿಯ ಘಟನೆ ನಡೆದಿದೆ. ಅವರು ದೆಹಲಿ ಪರ ಆಡುತ್ತಿದ್ದರು, ಇದ್ದಕ್ಕಿದ್ದಂತೆ ಅವರ ತಂದೆ ನಿಧನರಾದರು. ಇದರ ಹೊರತಾಗಿಯೂ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್ ಉತ್ತಮ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಇದಾದ ನಂತರ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.