ODI ಕ್ರಿಕೆಟ್ನಿಂದ ಆರನ್ ಫಿಂಚ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್(Pat Cummins) ಅವರನ್ನೇ ಏಕದಿನ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಫಿಂಚ್, ODI ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ತಂಡದ ನಾಯಕ ಸ್ಥಾನ ಕೂಡ ತೆರವಾಗಿತ್ತು. ಈ ನಡುವೆ ODI ತಂಡದ ನಾಯಕರಾಗುವ ರೇಸ್ನಲ್ಲಿ ಅನುಭವಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇದ್ದರು. ಆದರೆ ಡೇವಿಡ್ ವಾರ್ನರ್ ನಾಯಕತ್ವದಿಂದ ಲೈಫ್ ಟೈಮ್ ನಿಷೇಧದ ಶಿಕ್ಷೆಗೆ ಒಳಗಾಗಿರುವುದರಿಂದ ವಾರ್ನರ್ ಆಯ್ಕೆಯನ್ನ ಕ್ರಿಕೆಟ್ ಆಸ್ಟ್ರೇಲಿಯಾ ಕೈಬಿಟ್ಟಿತ್ತು.

ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಕಮ್ಮಿನ್ಸ್ ಅವರನ್ನು ಆಸ್ಟ್ರೇಲಿಯಾದ 27ನೇ ODI ನಾಯಕನಾಗಿ ಆಯ್ಕೆ ಮಾಡಿದೆ. ಅಲ್ಲದೇ ಭಾರತದಲ್ಲಿ ನಡೆಯುವ 2023ರ ವಿಶ್ವಕಪ್ ಟೂರ್ನಿಗೆ ಪ್ಯಾಟ್ ಕಮ್ಮಿನ್ಸ್ ಸಾರಥ್ಯದಲ್ಲೇ ಆಸ್ಟ್ರೇಲಿಯಾ ಮುನ್ನಡೆಯಲಿದೆ ಎಂದು ತಿಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿರ್ಧಾರದಿಂದ ಪ್ಯಾಟ್ ಕಮ್ಮಿನ್ಸ್, ಸೀಮಿತ ಓವರ್ಗಳಲ್ಲಿ ಆಸ್ಟ್ರೇಲಿಯಾ ಪುರುಷರ ತಂಡದ ನಾಯಕತ್ವ ವಹಿಸಿದ ಮೊದಲ ವೇಗದ ಬೌಲರ್ ಎನಿಸಿದ್ದು, ಈ ಹಿಂದೆ 1990ರಲ್ಲಿ ಶೇನ್ ವಾರ್ನ್, 11 ODI ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ತಂಡವನ್ನ ಮುನ್ನಡೆಸಿದ ಮೊದಲ ಬೌಲರ್ ಎನಿಸಿದ್ದರು.
ಸದ್ಯ ಟಿ20 ವಿಶ್ವಕಪ್ ಎದುರು ನೋಡುತ್ತಿರುವ ಆಸ್ಟ್ರೇಲಿಯಾ, ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಹೊಸ ನಾಯಕನೊಂದಿಗೆ ತನ್ನ ಮೊದಲ ಸವಾಲನ್ನ ಎದುರಿಸಲಿದೆ. 29 ವರ್ಷದ ಪ್ಯಾಟ್ ಕಮ್ಮಿನ್ಸ್ ನವೆಂಬರ್ ತಿಂಗಳಲ್ಲಿ ತವರಿನಲ್ಲಿ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.