ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಲೆಕ್ಕಾಚಾರ ಆರಂಭವಾಗಿದೆ. ಹರಾಜು ಪ್ರಕ್ರಿಯೆ ಮುಗಿದು ಎಲ್ಲಾ ತಂಡಗಳು ಆಟಗಾರರನ್ನು ಕ್ಯಾಂಪ್ ಸೇರಿಸಿಕೊಳ್ಳುವ ಪ್ಲಾನ್ ಮಾಡುತ್ತಿವೆ. ಈ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಐಪಿಎಲ್ಗೆ ಶಾಕ್ ನೀಡಿದೆ. ತನ್ನ ಆಟಗಾರರನ್ನು ಐಪಿಎಲ್ನ ಕೆಲ ಪಂದ್ಯಗಳಿಗೆ ಕಳುಹಿಸದೇ ಇರಲು ನಿರ್ಧರಿಸಿದೆ.
ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ದ ಸರಣಿ ಆಡಲು ತೆರಳಲಿದೆ. ಪಾಕ್ ಪ್ರವಾಸ ಮಾಡುವ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ವಿಶ್ರಾಂತಿ ನೆಪವೊಡ್ಡಿ ಗೈರಾಗಿದ್ದಾರೆ. ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್ವುಡ್ ಪಾಕ್ ಪ್ರವಾಸ ಮಾಡುವುದಿಲ್ಲ. ಮೇಲ್ನೋಟಕ್ಕೆ ಈ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲು ಸರಣಿಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಪ್ರತಿತಂತ್ರವಾಗಿ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದೇಶದ ಆಟಗಾರರು ಪಾಕಿಸ್ತಾನ ವಿರುದ್ದದ ಸರಣಿ ಮುಗಿಯುವವರೆಗೆ ಐಪಿಎಲ್ನಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದೆ.
ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಣ ಸರಣಿ ಏಪ್ರಿಲ್ 6 ಕ್ಕೆ ಮುಗಿಯಲಿದೆ. ಅದುವರೆಗೆ ತಂಡದಿಂದ ಹೊರಗುಳಿದಿರುವ ಆಟಗಾರರು ಕೂಡ ಯಾವುದೇ ಲೀಗ್ನಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದೆ. ಇತ್ತ ಸ್ಟಾರ್ ಆಟಗಾರರಿಗಾಗಿ ಕೋಟಿಗಟ್ಟಲೆ ಹಣ ಸುರಿದು ತಂಡ ಕಟ್ಟಿರುವ ಐಪಿಎಲ್ ಫ್ರಾಂಚೈಸಿಗಳು ಕ್ರಿಕೆಟ್ ಆಸ್ಟ್ರೇಲಿಯಾ ನಡೆಯಿಂದ ಕೋಪಗೊಂಡಿದ್ದಾರೆ.
ಏಕೆಂದರೆ ಏಪ್ರಿಲ್ 6ರ ಬಳಿಕ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದರೂ ಕನಿಷ್ಠ ಎಂದರೂ ಐದು ದಿನಗಳ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಅದರಂತೆ ಏಪ್ರಿಲ್ 11 ಅಥವಾ 12 ರಂದು ಆಸ್ಟ್ರೇಲಿಯಾದ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಾರೆ. ಇದು ಆರಂಭದ 5 ಪಂದ್ಯಗಳನ್ನು ತಪ್ಪಿಸಲಿದೆ.
IPL 2022 ನಲ್ಲಿ ಆಸ್ಟ್ರೇಲಿಯಾದ ಹಲವು ಆಟಗಾರರು ವಿವಿಧ ಫ್ರಾಂಸೈಸಿಗಳಲ್ಲಿ ಆಡಲಿದ್ದಾರೆ.
- ಪ್ಯಾಟ್ ಕಮ್ಮಿನ್ಸ್ – ಕೋಲ್ಕತ್ತಾ ನೈಟ್ ರೈಡರ್ಸ್ (7.25 ಕೋಟಿ ರೂ.)
- ಮಿಚೆಲ್ ಮಾರ್ಷ್- ಡೆಲ್ಲಿ ಕ್ಯಾಪಿಟಲ್ಸ್ (6.50 ಕೋಟಿ ರೂ.)
- ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ (6.25 ಕೋಟಿ ರೂ.)
- ಮುಂಬೈ ಇಂಡಿಯನ್ಸ್ – ಡೇನಿಯಲ್ ಸ್ಯಾಮ್ಸ್ (2.6 ಕೋಟಿ ರೂ.)
- ಮ್ಯಾಥ್ಯೂ ವೇಡ್ – ಗುಜರಾತ್ ಲಯನ್ಸ್ (2.4 ಕೋಟಿ ರೂ.)
- ಸೀನ್ ಅಬಾಟ್ – ಸನ್ ರೈಸರ್ಸ್ ಹೈದರಾಬಾದ್ (2.4 ಕೋಟಿ ರೂ.)
- ನಾಥನ್ ಕೌಲ್ಟರ್ ನೈಲ್ – ರಾಜಸ್ಥಾನ್ ರಾಯಲ್ಸ್ (2 ಕೋಟಿ ರೂ.)
- ರಿಲೆ ಮೆರೆಡಿತ್ – ಮುಂಬೈ ಇಂಡಿಯನ್ಸ್ (1 ಕೋಟಿ ರೂ.)
- ನಾಥನ್ ಎಲ್ಲಿಸ್ – ಪಂಜಾಬ್ ಕಿಂಗ್ಸ್ (75 ಲಕ್ಷ ರೂ.)
- ಜೇಸನ್ ಬೆಹ್ರೆಂಡಾರ್ಫ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು (75 ಲಕ್ಷ ರೂ.)
- ಗ್ಲೆನ್ ಮ್ಯಾಕ್ಸ್‌ವೆಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಕೋಟಿ ರೂ.)
- ಮಾರ್ಕಸ್ ಸ್ಟೊಯಿನಿಸ್ – ಲಕ್ನೋ ಸೂಪರ್ ಜೈಂಟ್ಸ್ (9.20 ಕೋಟಿ ರೂ.)