15ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ಯಾರು? ಹಲವು ತಿಂಗಳಿಂದ ಉತ್ತರ ಸಿಗದ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗುವ ಕಾಲ ಕೂಡಿಬಂದಿದೆ. ಕೋಟ್ಯಾಂತರ ಅಭಿಮಾನಿಗಳ ಕುತೂಹಲ ಕೆರಳಿಸಿರೋ ಈ ಪ್ರಶ್ನೆಗೆ ಮಾ.12ರಂದು ಉತ್ತರ ದೊರೆಯಲಿದೆ.
ಕ್ಯಾಪ್ಟನ್ ಆಯ್ಕೆ ವಿಷಯದಲ್ಲಿ ಸಿಕ್ರೇಟ್ ಕಾಪಾಡಿಕೊಂಡಿರುವ ಆರ್ಸಿಬಿ, ಈ ಬಾರಿ ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಕ್ಯಾಪ್ಟನ್ ಆಯ್ಕೆ ವಿಷಯದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸ್ಸಿ ಹಾಗೂ ದಿನೇಶ್ ಕಾರ್ತಿಕ್ ಅವರುಗಳ ಹೆಸರು ಹರಿದಾಡುತ್ತಿದೆ. ಇದೀಗ ಈ ಪಟ್ಟಿಗೆ ಮೊಹಮ್ಮದ್ ಸಿರಾಜ್ ಹೆಸರು ಸಹ ಸೇರ್ಪಡೆಯಾಗಿದೆ.
ಈ ಕುತೂಹಲಕ್ಕೆ ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೋವೊಂದು ಹೆಚ್ಚಿನ ಪುಷ್ಟಿ ನೀಡಿದೆ. ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿರುವ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸ್ಸಿ, ಹರ್ಷಲ್ ಪಟೇಲ್ ಜೊತೆಗೆ ಮೊಹಮ್ಮದ್ ಸಿರಾಜ್ ಇದ್ದು, ಈ ಫೋಟೋದಲ್ಲಿ ಮೊಹಮ್ಮದ್ ಸಿರಾಜ್ ಕುಳಿತಿದ್ದರೆ, ಉಳಿದ ನಾಲ್ವರು ಸಿರಾಜ್ ಅವರ ಸುತ್ತಾ ನಿಂತಿದ್ದಾರೆ. ಆರ್ಸಿಬಿ ಅನ್ಬಾಕ್ಸ್ ಹೆಸರಿನಲ್ಲಿರೋ ಈ ಫೋಟೋ ನೋಡಿರುವ ಅಭಿಮಾನಿಗಳು ಸಿರಾಜ್ ಅವರೇ ಹೊಸ ಕ್ಯಾಪ್ಟನ್ ಎನ್ನುತ್ತಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿರುವ 10 ತಂಡಗಳ ಪೈಕಿ ಎಲ್ಲಾ 9 ತಂಡಗಳು ತನ್ನ ನಾಯಕ ಯಾರೆಂಬುದನ್ನ ಬಹಿರಂಗಪಡಿಸಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಈವರೆಗೂ ಕ್ಯಾಪ್ಟನ್ ಯಾರೆಂಬ ವಿಷಯದಲ್ಲಿ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಹೊಸ ನಾಯಕನ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿರುವ ಆರ್ಸಿಬಿ, ಮಾ.12ರಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಅನ್ಬಾಕ್ಸ್ ಕಾರ್ಯಕ್ರಮ ನಡೆಸಲಿದೆ.